► ಮಂಗಳೂರು ವಿವಿ ವಿದ್ಯಾರ್ಥಿ ಸಮನ್ವಯ ಸಮಿತಿಯಿಂದ ಕ್ಲಾಕ್ ಟವರ್ ಬಳಿ ಬೃಹತ್ ಪ್ರತಿಭಟನೆ
ಮಂಗಳೂರು: ಹಿಜಾಬ್ ವಿಚಾರವಾಗಿ ಹೈಕೋರ್ಟ್ ತೀರ್ಪನ್ನು ದುರುಪಯೋಗಪಡಿಸುತ್ತಿರುವ ಕಾಲೇಜುಗಳ ಮತ್ತು ಸರಕಾರದ ಅಸಾಂವಿಧಾನಿಕ ನಡೆಯ ವಿರುದ್ಧ ಮಂಗಳೂರು ವಿಶ್ವವಿದ್ಯಾನಿಲಯ ವಿದ್ಯಾರ್ಥಿ ಸಮನ್ವಯ ಸಮಿತಿ ಮಂಗಳೂರಿನ ಕ್ಲಾಕ್ ಟವರ್ ಬಳಿ ಶುಕ್ರವಾರ ಬೃಹತ್ ಪ್ರತಿಭಟನೆ ನಡೆಸಿ ವಿವಿ ಅಧಿಕಾರಿಗಳ ಕೃತ್ಯವನ್ನು ಖಂಡಿಸಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಮಂಗಳೂರು ವಿಶ್ವವಿದ್ಯಾನಿಲಯ ವಿದ್ಯಾರ್ಥಿ ಸಮನ್ವಯ ಸಮಿತಿ ಅಧ್ಯಕ್ಷ ರಿಯಾಝ್ ಅಂಕತ್ತಡ್ಕ, ಹಿಜಾಬ್ ಹೆಸರಿನಲ್ಲಿ ಮುಸ್ಲಿಮ್ ವಿದ್ಯಾರ್ಥಿನಿಯರಿಗೆ ಕಾಲೇಜುಗಳಲ್ಲಿ ಕಿರುಕುಳ ನೀಡಲಾಗುತ್ತಿದ್ದು, ನ್ಯಾಯ ಪಾಲಿಸಬೇಕಾದ ವಿಶ್ವವಿದ್ಯಾಲಯದ ಅಧಿಕಾರಿಗಳು ಹೈಕೋರ್ಟ್ ತೀರ್ಪಿನ ನೆಪವೊಡ್ಡಿ ಪರೀಕ್ಷೆ ಬರೆಯದಂತೆ ತಡೆಯುತ್ತಿದ್ದಾರೆ. ವಿದ್ಯಾರ್ಥಿನಿಯ ಸಮಸ್ಯೆಯನ್ನು ಬಗೆಹರಿಸದಿದ್ದರೆ ಮುಂದಿನ ದಿನಗಳಲ್ಲಿ ಡಿಸಿ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು.
ವಿದ್ಯಾರ್ಥಿಗಳು ತಮಗಾದ ಅನ್ಯಾಯದ ಬಗ್ಗೆ ಹೇಳಿಕೊಳ್ಳಲು ಪ್ರತಿಭಟನೆ ನಡೆಸಲು ಮುಂದಾದಾಗ ಅದನ್ನು ತಡೆಯುವ ಪ್ರಯತ್ನ ಕೂಡ ನಡೆಯಿತು. ಈ ಪ್ರತಿಭಟನೆ ಹೈಕೋರ್ಟ್ ತೀರ್ಪಿನ ವಿರುದ್ಧವಲ್ಲ. ಹೈಕೋರ್ಟ್ ತೀರ್ಪನ್ನು ದುರುಪಯೋಗಪಡಿಸಿಕೊಂಡು ವಿದ್ಯಾರ್ಥಿಗಳ ಹಕ್ಕನ್ನು ಕಸಿಯುತ್ತಿರುವ ಶಕ್ತಿಗಳ ವಿರುದ್ಧವಾಗಿದೆ, ಹಿಜಾಬ್ ಕುರಿತ ಹೈಕೋರ್ಟ್ ತೀರ್ಪು ಹೈಸ್ಕೂಲ್ ಮತ್ತು ಪಿಯು ಕಾಲೇಜುಗಳಿಗೆ ಮಾತ್ರ ಅನ್ವಯವಾಗುತ್ತದೆ. ಪದವಿ ಕಾಲೇಜುಗಳಿಗೆ ಅನ್ವಯವಾಗುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದ್ದರೂ ಕೆಲವು ಶಕ್ತಿಗಳು ಮುಸ್ಲಿಮ್ ವಿದ್ಯಾರ್ಥಿನಿಯರನ್ನು ಗುರಿಪಡಿಸಿ ಅವರನ್ನು ತರಗತಿ, ಪರೀಕ್ಷೆಗಳಿಂದ ದೂರ ಇಡುತ್ತಿದೆ ಎಂದು ಆಕ್ಷೇಪಿಸಿದರು.
ಹಿಜಾಬ್ ವಿಷಯದಲ್ಲಿ ನ್ಯಾಯಾಲಯದಿಂದ ತೀರ್ಪು ಮಾತ್ರ ಬಂದಿದೆ. ಆದರೆ ನ್ಯಾಯ ದೊರಕಿಲ್ಲ. ಇದನ್ನು ಸುಪ್ರೀಂಕೋರ್ಟ್ ನಲ್ಲಿ ಪ್ರಶ್ನಿಸಲಾಗಿದೆ. ಹಿಜಾಬ್ ವಿಷಯದಲ್ಲಿ ರಾಜ್ಯದ ಎಲ್ಲಾ ವಿದ್ಯಾರ್ಥಿಗಳನ್ನು ಸೇರಿಸಿ ಹಿಜಾಬ್ ಚಳವಳಿ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
ಮಂಗಳೂರು ವಿವಿ ವಿದ್ಯಾರ್ಥಿ ಸಮನ್ವಯ ಸಮಿತಿ ಸದಸ್ಯ ಹಾಗೂ ಕ್ಯಾಂಪಸ್ ಫ್ರಂಟ್ ರಾಜ್ಯ ಕೋಶಾಧಿಕಾರಿ ಸವಾದ್ ಕಲ್ಲರ್ಪೆ ಮಾತನಾಡಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಜ್ಯದ ಮುಖ್ಯಮಂತ್ರಿಯಾದ ಬಳಿಕ ಸಂವಿಧಾನ ಬುಡಮೇಲುಗೊಳಿಸುವ ಕೃತ್ಯಗಳು ನಿರಂತರವಾಗಿ ನಡೆಯುತ್ತಿವೆ. ಸಂಘಪರಿವಾರದ ಕಾರ್ಯಕರ್ತರು ಸಂವಿಧಾನ, ರಾಷ್ಟ್ರಧ್ವಜದ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡುತ್ತಿದ್ದರೂ ಅವರ ವಿರುದ್ಧ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ. ಮತಾಂತರ ನಿಷೇಧ, ಹಿಜಾಬ್ ನಿಷೇಧ, ಸರ್ಕಾರವೇ ಪರೋಕ್ಷವಾಗಿ ಇಂತಹವರಿಗೆ ಕುಮ್ಮಕ್ಕು ನೀಡುತ್ತಿದೆ. ಸಂಪುಟದ ಸಚಿವರೊಬ್ಬರು ಕೆಂಪುಕೋಟೆಯಲ್ಲಿ ಕೇಸರಿ ಧ್ವಜವನ್ನು ಹಾರಿಸುತ್ತೇವೆ ಎಂದು ಬಹಿರಂಗ ಹೇಳಿಕೆ ನೀಡಿದ್ದರೂ ಅವರ ವಿರುದ್ಧ ಇದುವರೆಗೆ ಯಾವುದೇ ಕ್ರಮಕೈಗೊಂಡಿಲ್ಲ. ಧಮ್ ಇದ್ದರೆ ಕೆಂಪುಕೋಟೆಯಲ್ಲಿ ನೀವು ಕೇಸರಿ ಧ್ವಜ ಹಾರಿಸಿನೋಡಿ, ಕ್ಯಾಂಪಸ್ ಫ್ರಂಟ್ ಇರುವವರೆಗೆ ಇದು ನಿಮ್ಮಿಂದ ಸಾಧ್ಯವಿಲ್ಲ ಎಂದು ಸವಾಲು ಹಾಕಿದರು.
ವಿದ್ಯಾರ್ಥಿ ನಾಯಕಿ ಗೌಸಿಯಾ ಮಾತನಾಡಿ, ಹಿಜಾಬ್ ಹೆಸರಿನಲ್ಲಿ ಮುಸ್ಲಿಮ್ ವಿದ್ಯಾರ್ಥಿನಿಯರ ಮೂಲಭೂತ ಹಕ್ಕನ್ನು ಕಸಿದುಕೊಳ್ಳಲಾಗಿದೆ. ಸಂವಿಧಾನದಲ್ಲಿ ಕೊಡಮಾಡಿದ ಸ್ವಾತಂತ್ರ್ಯದ, ಸಮಾನತೆ ಹಕ್ಕನ್ನು ಕಸಿಯಲಾಗಿದೆ. ಘನತೆಯಿಂದ ಜೀವಿಸುವ ಹಕ್ಕನ್ನು ದಮನ ಮಾಡಲಾಗಿದೆ. ಹಿಜಾಬ್ ಯಾವತ್ತೂ ವಿವಾದವಾಗಿರಲಿಲ್ಲ. ಕೇಸರಿ ಶಾಲು ಬಂದ ಬಳಿಕವಷ್ಟೇ ಇದು ವಿವಾದವಾಯಿತು. ಇದರ ಹಿಂದೆ ಮುಸ್ಲಿಮ್ ಹೆಣ್ಣು ಮಕ್ಕಳನ್ನು ಶಿಕ್ಷಣದಿಂದ ವಂಚಿತಗೊಳಿಸುವ ಹುನ್ನಾರ ಅಡಗಿದೆ ಎಂದು ಹೇಳಿದರು.
ವಿದ್ಯಾರ್ಥಿನಿ ನಾಯಕಿ ಅಶ್ಫಿ ಮಾತನಾಡಿ, ನ್ಯಾಯಾಲಯದಿಂದ ಈ ರೀತಿಯ ತೀರ್ಪು ಬರುತ್ತದೆ ಎಂದು ಯಾರು ಕೂಡ ನಿರೀಕ್ಷಿಸಿರಲಿಲ್ಲ. ಸಂವಿಧಾನದ ತತ್ವಗಳಿಗೆ ವಿರುದ್ಧವಾಗಿ ತೀರ್ಪು ಬಂದಿದೆ. ಇದರಿಂದ ನ್ಯಾಯಾಂಗದ ಮೇಲಿನ ವಿಶ್ವಾಸ ಕುಸಿಯುವಂತೆ ಮಾಡಿದೆ ಎಂದು ಹೇಳಿದರು. ಮಂಗಳೂರಿನ ರಥಬೀದಿಯ ಸರಕಾರಿ ಕಾಲೇಜಿನ ವಿದ್ಯಾರ್ಥಿನಿ ಹಿಬಾ ಶೇಖ್ ಅವರು ಹಿಜಾಬ್ ಹೆಸರಿನಲ್ಲಿ ಕಾಲೇಜಿನಲ್ಲಿ ತಾವು ಅನುಭವಿಸಿದ ನೋವನ್ನು ಹಂಚಿಕೊಂಡರು.
ಸಮಿತಿಯ ಸಂಚಾಲಕ ಅಶಾಮ್, ಮುನೀರ್ ಬಜಾಲ್, ರಿಫಾಝ್, ಮುಕ್ತಾರ್ ಮತ್ತಿತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.