ಹಿರಿಯ ಕೆಎಎಸ್ ಅಧಿಕಾರಿ ರಂಗನಾಥ್ ಕಚೇರಿ ಮನೆಗಳ ಮೇಲೆ ಎಸಿಬಿ ದಾಳಿ

Prasthutha|

ಬೆಂಗಳೂರು: ಹಿರಿಯ ಕೆಎಎಸ್ ಅಧಿಕಾರಿ ಕರ್ನಾಟಕ ಸಾರ್ವಜನಿಕ ಜಮೀನುಗಳ ನಿಗಮಗಳ ಪ್ರಧಾನ ವ್ಯವಸ್ಥಾಪಕ ಕೆ.ರಂಗನಾಥ್‌ ಅವರ ಮನೆ, ಕಚೇರಿ ಇತರ ಸ್ಥಳಗಳ ಮೇಲೆ ಎಕಕಾಲದ ದಾಳಿ ಮಾಡಿರುವ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳು ಶೋಧ ನಡೆಸುತ್ತಿದ್ದಾರೆ.

- Advertisement -

ಬೆಂಗಳೂರು ಉತ್ತರ ಉಪ ವಿಭಾಗಾಧಿಕಾರಿ ಹುದ್ದೆಯಲ್ಲಿದ್ದ ಅವಧಿಯಲ್ಲಿ ಸರ್ಕಾರಿ ಜಮೀನುಗಳನ್ನು ಅಕ್ರಮವಾಗಿ ಪರಭಾರೆ ಮಾಡಿರುವ ಆರೋಪ ಎದುರಿಸುತ್ತಿರುವ ಕೆ.ರಂಗನಾಥ್‌ ಮನೆ, ಕಚೇರಿ ಮತ್ತು ಇತರ ಸ್ಥಳಗಳ ಮೇಲೆ ದಾಳಿ ಮಾಡಿ ಎಸಿಬಿ ಅಧಿಕಾರಿಗಳು ಶೋಧ ಕೈಗೊಂಡಿದ್ದಾರೆ.

ರಂಗನಾಥ್  ಅವರ ನಗರದ ನ್ಯಾಯಾಂಗ ಬಡಾವಣೆಯಲ್ಲಿರುವ ವಾಸದ ಮನೆ, ನಾಗರಬಾವಿಯಲ್ಲಿರುವ ಸಂಬಂಧಿಕರ ಮನೆ, ದೊಡ್ಡ ಬಳ್ಳಾಪುರದಲ್ಲಿರುವ ಕಲ್ಯಾಣ ಮಂಟಪ ಮತ್ತು ಟೌನ್ ಕನಕ ಶ್ರೀ ಟ್ರಸ್ಟ್ ಕಚೇರಿ, ಅಕ್ಷರ ಪಬ್ಲಿಕ್ ಸ್ಕೂಲ್, ಉತ್ತರ ತಾಲೂಕು ವಿಭಾಗದ ಕಚೇರಿ, ಮೇಲೆ ದಾಳಿ ಮಾಡಲಾಗಿದೆ.

- Advertisement -

ನಗರ ಘಟಕದ ಎಸಿಬಿಯ 42 ಮಂದಿ  ಅಧಿಕಾರಿಗಳು 5 ತಂಡಗಳಾಗಿ ದಾಳಿ ಮಾಡಿ ಪರಿಶೀಲನೆ ನಡೆಸುತ್ತಿದ್ದು ಇಂದು ಮುಂಜಾನೆಯಿಂದ ನಡೆದಿರುವ ಎಕಕಾಲದ ದಾಳಿಯು ಮಧ್ಯಾಹ್ನದವರೆಗೆ ಮುಂದುವರೆದಿದ್ದು ಅಪಾರ ಪ್ರಮಾಣದ ದಾಖಲೆ ಪತ್ರಗಳನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗಿದೆ.

ಕಳೆದ 2020ರ ಮಾರ್ಚ್‌ 26ರಿಂದ ಜೂನ್‌ 20ರವರೆಗಿನ ಅವಧಿಯಲ್ಲಿ ಬೆಂಗಳೂರು ಉತ್ತರ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ತಹಶೀಲ್ದಾರ್‌ ಮೂಲಕ ವರದಿ ಪಡೆಯದೇ ಅಕ್ರಮವಾಗಿ 37 ಎಕರೆ 10 ಗುಂಟೆ ಸರ್ಕಾರಿ ಗೋಮಾಳ ಜಮೀನನ್ನು ಖಾಸಗಿಯವರಿಗೆ ಪರಭಾರೆ ಮಾಡಿ ಆದೇಶ ಹೊರಡಿಸಿರುವ ಆರೋಪ ರಂಗನಾಥ್‌ ಮೇಲಿದೆ.

ಅಂದಿನ ತಹಶಿಲ್ದಾರ್ ಗಮನಕ್ಕೆ ಬಾರದೇ, ದಾಖಲೆಗಳನ್ನು ಪರಿಶೀಲನೆ ಮಾಡದೇ ಕೇವಲ ಮೂರೇ ದಿನಗಳಲ್ಲಿ ಗೋಮಾಳ ಜಮೀನನ್ನು ಪರಭಾರೆ ಮಾಡಿರುವ ಆರೋಪವನ್ನು ರಂಗನಾಥ್ ಎದುರಿಸುತ್ತಿದ್ದಾರೆ

ಆರೋಪದ ಹಿನ್ನಲೆಯಲ್ಲಿ  ಅವರನ್ನು ಸೇವೆಯಿಂದ ಅಮಾನತು ಮಾಡಿರುವ ರಾಜ್ಯ ಸರ್ಕಾರ, ಆರೋಪಗಳ ಕುರಿತು ತನಿಖೆ ನಡೆಸುವಂತೆ ಎಸಿಬಿಗೆ ಆದೇಶಿಸಿತ್ತು.

ಸರ್ಕಾರದ ಆದೇಶದಂತೆ ಎಫ್‌ಐಆರ್‌ ದಾಖಲಿಸಿ, ತನಿಖೆ ಆರಂಭಿಸಲಾಗಿದೆ. ರಂಗನಾಥ್‌ ಈ ಹಿಂದೆ ಕಾರ್ಯನಿರ್ವಹಿಸುತ್ತಿದ್ದ ಬೆಂಗಳೂರು ಉತ್ತರ ಉಪ ವಿಭಾಗಾಧಿಕಾರಿ ಕಚೇರಿಯಲ್ಲೂ ಶೋಧ ನಡೆಸಲಾಗುತ್ತಿದೆ ಎಂದು ಎಸಿಬಿ ಮೂಲಗಳು ತಿಳಿಸಿವೆ.



Join Whatsapp