ಶೋಕಿಗಾಗಿ ಖಾಸಗಿ ವ್ಯಕ್ತಿಗಳಿಗೆ ಭದ್ರತೆ ಒದಗಿಸುವುದಿಲ್ಲ: ಆರಗ ಜ್ಞಾನೇಂದ್ರ

Prasthutha|

ಬೆಂಗಳೂರು: ಶೋಕಿಗಾಗಿ ಖಾಸಗಿ ವ್ಯಕ್ತಿಗಳಿಗೆ ಭದ್ರತೆ ಒದಗಿಸುವುದಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ವಿಧಾನ ಪರಿಷತ್ ನಲ್ಲಿ ಕಾಂಗ್ರೆಸ್ ಸದಸ್ಯ ಆರ್.ಬಿ.ತಿಮ್ಮಾಪುರ್ ಗಣ್ಯರ ಭದ್ರತೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಗೌಪ್ಯತೆ ದೃಷ್ಟಿಯಿಂದ ಸಂಪೂರ್ಣ ವಿವರ ಕೊಡಲು ಸಾಧ್ಯವಿಲ್ಲ. ಆದರೆ ದೇಶದಲ್ಲಿ ರಾಷ್ಟ್ರಪತಿ, ಪ್ರಧಾನಿ, ರಾಜ್ಯಪಾಲರು, ನ್ಯಾಯಾಧೀಶರು ಸೇರಿದಂತೆ ಗಣ್ಯ ವ್ಯಕ್ತಿಗಳಿಗೆ ಭದ್ರತೆ ಒದಗಿಸಲಾಗುತ್ತಿದೆ. ವ್ಯಕ್ತಿಗಳ ಸ್ಥಾನ ಆಧರಿಸಿ ಮತ್ತು ಬೆದರಿಕೆ ಪ್ರಮಾಣವನ್ನು ಪರಿಗಣಿಸಿ ಭದ್ರತೆ ಒದಗಿಸಲಾಗಿದೆ ಎಂದು ತಿಳಿಸಿದರು.

- Advertisement -


ಭದ್ರತಾ ಸಿಬ್ಬಂದಿಗಳು ತಪ್ಪು ಮಾಡಿದರೂ ಮುಲ್ಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು. ಮುಖ್ಯಮಂತ್ರಿ ಮನೆಯಿಂದ ಸ್ವಲ್ಪ ದೂರದಲ್ಲಿ ಕಾವಲಿಗಿದ್ದ ಸಿಬ್ಬಂದಿಯೂ ಗಾಂಜಾದಲ್ಲಿ ಸಿಲುಕಿದ್ದ. ಆತನನ್ನು ಬಂಧಿಸಲಾಗಿದೆ. ಹಿಂದೆ ಇಂದಿರಾ ಗಾಂಧಿ ಹತ್ಯೆಯಲ್ಲೂ ಭದ್ರತಾ ಸಿಬ್ಬಂದಿ ಭಾಗಿಯಾಗಿದ್ದರು ಎಂದರು.


ಖಾಸಗಿ ವ್ಯಕ್ತಿಗೆ ಗುಪ್ತಚರ ಮಾಹಿತಿ ಆಧರಿಸಿ ಭದ್ರತೆ ಒದಗಿಸಲಾಗುತ್ತಿದೆ. ಅಲಂಕಾರಕ್ಕಾಗಿ ಭದ್ರತೆ ನೀಡುವುದನ್ನು ನಿಲ್ಲಿಸಲಾಗಿದೆ. ಈ ಮೊದಲು ನೀಡಿದ್ದ ಭದ್ರತೆಯನ್ನು ಹಿಂಪಡೆಯಲಾಗಿದೆ. ಸರ್ಕಾರ ಪ್ರತಿ ಸಿಬ್ಬಂದಿಗೆ 50 ರಿಂದ 60 ಸಾವಿರ ರೂಪಾಯಿ ವೆಚ್ಚ ತಗುಲಲಿದೆ. ಅದಕ್ಕಾಗಿ ಅನಗತ್ಯವಾಗಿ ಭದ್ರತೆಯನ್ನು ಒದಗಿಸಲು ಸಾಧ್ಯವಿಲ್ಲ ಎಂದರು.




Join Whatsapp