ಲಕ್ನೋ : ವಿವಾದಿತ “ದಿ ಕಾಶ್ಮೀರ್ ಫೈಲ್ಸ್” ಸಿನಿಮಾ ಸಾಕಷ್ಟು ವಿಷಯಗಳಿಗೆ ಸುದ್ದಿ ಆಗುತ್ತಿದೆ. ಉತ್ತರ ಪ್ರದೇಶ ನಿಯೋಜಿತ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪ್ರಮಾಣವಚನ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ “ದಿ ಕಾಶ್ಮೀರ್ ಫೈಲ್ಸ್” ಚಿತ್ರತಂಡಕ್ಕೂ ಆಹ್ವಾನ ನೀಡಲಾಗಿದೆ. ಚಿತ್ರದಲ್ಲಿ ನಟಿಸಿರುವ ಬಾಲಿವುಡ್ ಹಿರಿಯ ನಟ ಅನುಪಮ್ ಖೇರ್ ಮತ್ತು ನಿರ್ದೇಶಕ ಅಗ್ನಿಹೋತ್ರಿರಿಗೆ ಆಹ್ವಾನಿಸಲಾಗಿದೆ.
ಮಾರ್ಚ್ 25 ರ ಶುಕ್ರವಾರ ಸಂಜೆ 4 ಗಂಟೆಗೆ ಲಕ್ನೋದಲ್ಲಿರುವ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನೂತನ ಮುಖ್ಯಮಂತ್ರಿ ಆಗಿ ಯೋಗಿ ಆದಿತ್ಯನಾಥ್ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಲಕ್ನೋದಲ್ಲಿ ಶುಕ್ರವಾರ ನಡೆಯಲಿರುವ ಪ್ರಮಾಣವಚನ ಕಾರ್ಯಕ್ರಮಕ್ಕೆ ಅದ್ಧೂರಿ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ.
ಇನ್ನು ಪ್ರಮಾಣವಚನ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಜೊತೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಎಲ್ಲಾ ರಾಜ್ಯಗಳ ಬಿಜೆಪಿ ರಾಜ್ಯಾಧ್ಯಕ್ಷರು ಹಾಗೂ ಬಿಜೆಪಿ ಸರ್ಕಾರಗಳಿರುವ ರಾಜ್ಯಗಳ ಮುಖ್ಯಮಂತ್ರಿಗೆ ಆಹ್ವಾನ ನೀಡಲಾಗಿದೆ ಎಂದು ತಿಳಿದು ಬಂದಿದೆ.