► ಕ್ರೀಡಾ ಕ್ಷೇತ್ರದ ಬೆಳವಣಿಗೆಗೆ ಪರಸ್ಪರ ಸಹಕಾರ, ಮಾನವ ಸಂಪನ್ಮೂಲಗಳ ಸದ್ಬಳಕೆಗೆ ನಿರ್ಧಾರ
ಬೆಂಗಳೂರು: ‘ರಾಷ್ಟ್ರೀಯ ಶಿಕ್ಷಣ ನೀತಿ-2020’ರ ಅನ್ವಯ ಶಿಕ್ಷಣದ ಜೊತೆಗೆ ಕ್ರೀಡೆಯನ್ನು ಅಂತರ್ಗತಗೊಳಿಸಲು ಶಿಕ್ಷಣ ಇಲಾಖೆ ಮತ್ತು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಪರಸ್ಪರ ಸಹಯೋಗ ಮತ್ತು ಸಮನ್ವಯದೊಂದಿಗೆ ಕಾರ್ಯ ನಿರ್ವಹಿಸಲಿವೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವರು ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಸಿ ನಾಗೇಶ್ ತಿಳಿಸಿದರು.
ವಿಧಾನಸೌಧದ ಕಚೇರಿಯಲ್ಲಿ ಗುರುವಾರ (ಮಾ.24) ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವರಾದ ಡಾ. ಕೆ.ಸಿ. ನಾರಾಯಣ ಗೌಡ ಹಾಗೂ ಇಲಾಖೆಗಳ ಅಧಿಕಾರಿಗಳ ಜೊತೆ ಸಚಿವ ನಾಗೇಶ್ ಅವರು ಸಭೆ ನಡೆಸಿದರು.
‘ರಾಷ್ಟ್ರೀಯ ಶಿಕ್ಷಣ ನೀತಿ-2020’ರಲ್ಲಿ ಕ್ರೀಡೆಗೆ ಪ್ರೋತ್ಸಾಹ ನೀಡುವ ಅಂಶಗಳು ಇವೆ. ಶಿಕ್ಷಣದ ಜೊತೆಗೆ ಮಕ್ಕಳ ಆಸಕ್ತಿಯ ಕ್ರೀಡೆಗಳಿಗೆ ಪ್ರೋತ್ಸಾಹ ನೀಡಬೇಕಿದೆ. ಈ ನಿಟ್ಟಿನಲ್ಲಿ ಕ್ರೀಡಾ ಇಲಾಖೆಯೊಂದಿಗೆ ಹೆಚ್ಚಿನ ಸಮನ್ವಯತೆಯ ಅಗತ್ಯವಿದೆ. ಈ ನಿಟ್ಟಿನಲ್ಲಿ ರಾಜ್ಯದ ತಾಲೂಕು ಕೇಂದ್ರಗಳಲ್ಲಿನ ಕ್ರೀಡಾಂಗಣಗಳನ್ನು ಸದ್ಬಳಕೆ ಮಾಡಿಕೊಂಡು ಮಕ್ಕಳಿಗೆ ತರಬೇತಿ ನೀಡುವ ಉದ್ದೇಶ ಹೊಂದಲಾಗಿದೆ. ಈ ನಿಟ್ಟಿನಲ್ಲಿ ಎರಡೂ ಇಲಾಖೆಗಳು ಯೋಜನೆ ರೂಪಿಸುತ್ತಿವೆ’ ಎಂದು ಸಚಿವ ನಾಗೇಶ್ ತಿಳಿಸಿದರು.
‘ತಾಲೂಕು ಕೇಂದ್ರಗಳಲ್ಲಿ ನೂರಾರು ಕ್ರೀಡಾಂಗಣಗಳಿವೆ. ಕ್ರೀಡಾ ಇಲಾಖೆ, ತಾಲೂಕು ಆಡಳಿತಗಳಿಗೆ ಕಾರ್ಯಭಾರ ಹೆಚ್ಚಾಗಿರುವುದರಿಂದ ಕ್ರೀಡಾಪಟುಗಳಿಗೆ ತರಬೇತಿ, ಕ್ರೀಡಾಕೂಟಗಳ ಆಯೋಜನೆ ಹಾಗೂ ಕ್ರೀಡಾ ಚಟುವಟಿಕೆಗಳ ಕಡೆ ಹೆಚ್ಚು ಗಮನ ಹರಿಸಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆಯಲ್ಲಿರುವ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕರಿಗೆ ತಾಲೂಕು ಕ್ರೀಡಾಂಗಣ ಮೇಲ್ವಿಚಾರಣೆ ಜವಾಬ್ದಾರಿ ವಹಿಸಿದರೆ ಎರಡೂ ಇಲಾಖೆಗಳ ಸಮನ್ವಯದಿಂದ ಕ್ರೀಡಾ ಚಟುವಟಿಕೆಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ನಡೆಸಬಹುದು ಎಂಬುದರ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು’ ಎಂದು ಸಚಿವ ನಾಗೇಶ್ ತಿಳಿಸಿದರು.
‘ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದೊಂದಿಗೆ ದೈಹಿಕ ಶಿಕ್ಷಣ ದೈಹಿಕ ಪರಿವೀಕ್ಷಕರು ಕ್ರೀಡಾಂಗಣಗಳನ್ನು ಸೂಕ್ತ ರೀತಿಯಲ್ಲಿ ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗುತ್ತಿದೆ. ತಾಲೂಕು ಮತ್ತು ಹೋಬಳಿ ಮಟ್ಟದಲ್ಲಿ ಕ್ರೀಡಾಕೂಟಗಳನ್ನು ಆಯೋಜಿಸುವ ಉದ್ದೇಶವು ಇದೆ. ಇದರಿಂದ ಹೊಸ ಪ್ರತಿಭೆಗಳನ್ನು ಹುಡುಕಲು ಹಾಗೂ ಅಂತಹ ಪ್ರತಿಭೆಗಳಿಗೆ ವಿಶೇಷ ತರಬೇತಿ ನೀಡುವ ಮೂಲಕ ರಾಜ್ಯ ಮತ್ತು ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲು ಅವಕಾಶ ಸಿಗುತ್ತದೆ. ಕ್ರೀಡಾ ಇಲಾಖೆಗೆ ಶಿಕ್ಷಣ ಇಲಾಖೆ ಸಂಪೂರ್ಣ ಸಹಕಾರ ನೀಡುತ್ತದೆ’ ಎಂದು ಸಚಿವ ನಾಗೇಶ್ ಹೇಳಿದರು.
‘ಕ್ರೀಡಾಪಟುಗಳಿಗೆ ಪ್ರೋತ್ಸಾಹ ಹಾಗೂ ಕ್ರೀಡಾ ಕ್ಷೇತ್ರವನ್ನು ರಾಜ್ಯದಲ್ಲಿ ಬೆಳೆಸುವ ನಿಟ್ಟಿನಲ್ಲಿ ಸಚಿವರಾದ ಡಾ.ಕೆ ನಾರಾಯಣಗೌಡ ಅವರು ಗಂಭೀರವಾಗಿ ಚಿಂತನೆ ನಡೆಸಿ ಶಿಕ್ಷಣ ಇಲಾಖೆಯ ಸಹಯೋಗ, ಸಮನ್ವಯ ಕೋರಿದ್ದಾರೆ. ರಾಜ್ಯದಲ್ಲಿ ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ ಸೂಕ್ತ ತರಬೇತಿ ನೀಡಿ ಅವರನ್ನು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟಕ್ಕೆ ಕರೆದೊಯ್ಯುವ ಉದ್ದೇಶವನ್ನು ಹೊಂದಿದ್ದಾರೆ. ಕ್ರೀಡಾಂಗಣಗಳ ಸದ್ಬಳಕೆ, ಕ್ರೀಡಾಕೂಟಗಳ ಆಯೋಜನೆಯಿಂದ ರಾಜ್ಯ ಕ್ರೀಡಾ ಕ್ಷೇತ್ರ ಬೆಳೆಯುವ ವಿಶ್ವಾಸವಿದೆ’ ಎಂದು ಸಚಿವ ನಾಗೇಶ್ ನುಡಿದರು.
ಸಭೆಯಲ್ಲಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಶಿಕ್ಷಣ ಇಲಾಖೆ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.