ಬೆಂಗಳೂರು: ಹಿಜಾಬ್ ಕುರಿತ ಹೈಕೋರ್ಟ್ ತೀರ್ಪಿನ ನೆಪದಲ್ಲಿ ಮುಸ್ಲಿಮ್ ವಿದ್ಯಾರ್ಥಿಗಳನ್ನು ತರಗತಿಗಳಿಂದ ಹೊರಗಿಡಲಾಗುತ್ತಿದ್ದು, ಈ ಬಗ್ಗೆ ವಿಧಾನಸಭೆಯಲ್ಲಿ ಪ್ರಸ್ತಾಪಿಸಿ ಸಮಸ್ಯೆಗೆ ಪರಿಹಾರ ನೀಡಬೇಕು ಎಂದು ಮುಸ್ಲಿಮ್ ಧಾರ್ಮಿಕ ಮುಖಂಡರು ಗುರುವಾರ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.
ಕರ್ನಾಟಕ ಅಮೀರೆ ಶರೀಫ್ ಅವರ ನೇತೃತ್ವದ ನಿಯೋಗದಲ್ಲಿ ಶಾಸಕರಾದ ಝಮೀರ್ ಅಹ್ಮದ್, ಕೆ.ಜೆ.ಜಾರ್ಜ್, ನಸೀರ್ ಅಹ್ಮದ್, ರಿಝ್ವಾನ್ ಅರ್ಷದ್ ಸೇರಿದಂತೆ ಇತರ ಜನಪ್ರತಿನಿಧಿಗಳು ಭಾಗವಹಿಸಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ವಿಧಾನಸಭೆಯಲ್ಲಿ ವಿಷಯವನ್ನು ಪ್ರಸ್ತಾಪಿಸಲಾಗುವುದು ಎಂದು ಭರವಸೆ ನೀಡಿದರು.