ಜಾತ್ರಾ ಮಹೋತ್ಸವಗಳಲ್ಲಿ ಹಿಂದೂಯೇತರರಿಗೆ ವ್ಯಾಪಾರ ನಿರ್ಬಂಧ: ವಿಧಾನಸಭೆಯಲ್ಲಿ ಕಾಂಗ್ರೆಸ್ ಸದಸ್ಯರಿಂದ ತೀವ್ರ ಆಕ್ರೋಶ

Prasthutha|

ಬೆಂಗಳೂರು: ದೇವಸ್ಥಾನಗಳ ಜಾತ್ರಾ ಮಹೋತ್ಸವಗಳಲ್ಲಿ ಹಿಂದೂಯೇತರರಿಗೆ ವ್ಯಾಪಾರ ನಿರ್ಬಂಧ ವಿಧಿಸಿರುವ ವಿಷಯ ವಿಧಾನಸಭೆಯಲ್ಲಿ ಪ್ರಸ್ತಾಪವಾಗಿದ್ದು, ಭಾರೀ ಕೋಲಾಹಲ ಗದ್ದಲಕ್ಕೆ ಕಾರಣವಾಯಿತು. ಆರಂಭದಲ್ಲಿ ವಿಧಾನಸಭೆ ವಿಪಕ್ಷ ಉಪ ನಾಯಕ ಯು.ಟಿ. ಖಾದರ್ ವಿಷಯ ಪ್ರಸ್ತಾಪಿಸಿ, ಮುಸ್ಲಿಮರಿಗೆ ವ್ಯಾಪಾರ ನಿಷೇಧಿಸಿ ಬ್ಯಾನರ್ ಹಾಕಿದವರು ಹೇಡಿಗಳು, ಕ್ರೂರಿಗಳು. ಹೆಸರು ಹಾಕದೆ ಕೆಲವರು ಭಿತ್ತಿಪತ್ರಗಳನ್ನು ಅಳವಡಿಸುತ್ತಿದ್ದಾರೆ. ಸಮಸ್ಯೆ ಸೃಷ್ಟಿ ಮಾಡುವ ಕೆಲಸ ಮಾಡುತ್ತಿದ್ದಾರೆ. ಭಿತ್ತಿಪತ್ರ ಅಳವಡಿಸುವುದು ಪೊಲೀಸರಿಗೆ ಗೊತ್ತಿಲ್ಲವಾ? ಪೊಲೀಸರು ಕ್ರಮ ಕೈಗೊಂಡರೆ ಸಮಸ್ಯೆ ಬಗೆಹರಿಯುತ್ತದೆ ಎಂದು ಹೇಳಿದರು.

- Advertisement -


ಸಮಾಜದಲ್ಲಿ ವೈಮನಸ್ಸು ಸೃಷ್ಟಿಗೆ ಅವಕಾಶ ನೀಡಬಾರದು. ಭಿತ್ತಿಪತ್ರ ಹಾಕಿದವರ ಉದ್ದೇಶವೇನೆಂದು ಬಯಲಾಗಬೇಕು. ಅಂತಹವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಯು.ಟಿ. ಖಾದರ್ ಆಗ್ರಹಿಸಿದರು. ಈ ವೇಳೆ ಬಿಜೆಪಿ ಶಾಸಕರು ಖಾದರ್ ಅವರ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದರು.


ಈ ವೇಳೆ ಶಿವಾಜಿನಗರ ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್ ಎದ್ದು ನಿಂತು, ಒಂದು ವರ್ಗದ ವ್ಯಾಪಾರಿಗಳಿಗೆ ನಿರ್ಬಂಧ ಹಾಕಿರುವುದು ಆಘಾತಕಾರಿ ಘಟನೆ. ಇತಿಹಾಸ ಗೊತ್ತಿಲ್ಲದವರು ಭಿತ್ತಿಪತ್ರಗಳನ್ನು ಹಾಕುತ್ತಿದ್ದಾರೆ. ಒಂದು ಸಮುದಾಯಕ್ಕೆ ಬಹಿಷ್ಕಾರ ಹಾಕುವುದು ಸರಿಯಲ್ಲ. ಮುಂದಿನ ಪೀಳಿಗೆಗೆ ಒಳ್ಳೆಯದಾಗುವುದಿಲ್ಲ. ನಮ್ಮ ಸಾಂವಿಧಾನಿಕ ಹಕ್ಕನ್ನು ನಮಗೆ ಕೊಡಿ ಎಂದು ಹೇಳಿದರು.

- Advertisement -


ಮುಸ್ಲಿಂ ವ್ಯಾಪಾರಿಗಳಿಗೆ ದೇವಸ್ಥಾನ ವ್ಯಾಪ್ತಿಯಲ್ಲಿ ವ್ಯಾಪಾರ ನಿರ್ಬಂಧ ಬಗ್ಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಿದ್ದರಾಮಯ್ಯ, ಯು.ಟಿ. ಖಾದರ್ ರಿಂದ ಚರ್ಚೆ ನಡೆದಿದೆ. ವ್ಯಾಪಾರಕ್ಕೆ ಅವಕಾಶ ಮಾಡಿಕೊಡುವಂತೆ ಖಾದರ್ ಮನವಿ ಮಾಡಿದ್ದಾರೆ. ಸಿದ್ದರಾಮಯ್ಯ ಹಾಗೂ ಬಿ.ಎಸ್. ಯಡಿಯೂರಪ್ಪ ಕುಳಿತಿದ್ದ ಜಾಗಕ್ಕೆ ತೆರಳಿ ಮನವಿ ಮಾಡಿಕೊಂಡಿದ್ದಾರೆ.

ಹಿಂದೂಯೇತರರಿಗೆ ವ್ಯಾಪಾರಕ್ಕೆ ಅವಕಾಶ ನಿರ್ಬಂಧವನ್ನು ದುರುದ್ದೇಶದಿಂದ ಮಾಡಿದ್ದರೆ ಸರ್ಕಾರ ಅದನ್ನು ತಡೆಯಬೇಕು ಎಂದು ವಿಧಾನಸಭೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ ನೀಡಿದ್ದು ಕಾನೂನು ಏನಿದೆ ಎಂದು ನಾವು ಪರಿಶೀಲನೆ ಮಾಡುತ್ತೇವೆ ಎಂದು ಸದನದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಉತ್ತರಿಸಿದ್ದಾರೆ.




Join Whatsapp