ರಾಯಚೂರಿನಲ್ಲಿಯೇ ಏಮ್ಸ್ ಸ್ಥಾಪನೆಯಾಗಬೇಕು: ಕರ್ನಾಟಕ ಮುಸ್ಲಿಮ್ ಪೊಲಿಟಿಕಲ್ ಫೋರಂ

Prasthutha|

ರಾಯಚೂರು: ರಾಯಚೂರಿನಲ್ಲಿಯೇ ಏಮ್ಸ್ ಸ್ಥಾಪಿಸಬೇಕು. ನಂಜುಂಡಪ್ಪ ವರದಿ ಪ್ರಕಾರ ಜಿಲ್ಲೆಯಲ್ಲಿ ಐಐಟಿ ಸ್ಥಾಪಿಸಬೇಕಿತ್ತು. ಆದರೆ ಈ ವಿಷಯದಲ್ಲಿ ಜಿಲ್ಲೆಗೆ ಮೋಸ ಮಾಡಲಾಗಿದೆ. ಆದ್ದರಿಂದ ಏಮ್ಸ್ ಅನ್ನು ರಾಯಚೂರಿನಲ್ಲಿ ಸ್ಥಾಪಿಸಬೇಕು. ಈ ಹಿನ್ನೆಲೆಯಲ್ಲಿ ರಾಯಚೂರು ಜಿಲ್ಲಾ ಏಮ್ಸ್ ಹೋರಾಟ ಸಮಿತಿ ಹಮ್ಮಿಕೊಂಡಿರುವ ಪ್ರತಿಭಟನಾ ಮೆರವಣಿಗೆಗೆ ಸಂಪೂರ್ಣ ಬೆಂಬಲ ಸೂಚಿಸಲಾಗುವುದು ಎಂದು ಕರ್ನಾಟಕ ಮುಸ್ಲಿಮ್ ಪೊಲಿಟಿಕಲ್ ಫೋರಂ ಪ್ರಧಾನ ಕಾರ್ಯದರ್ಶಿ ಸಿರಾಜ್ ಜಾಫರಿ ತಿಳಿಸಿದ್ದಾರೆ.

- Advertisement -


ಜಂಟಿ ಕ್ರಿಯಾ ಸಮಿತಿ – ರಾಯಚೂರು (KMPF, WPI, PFI, SDPI, AIM ಫೌಂಡೇಶನ್ ಮತ್ತು ಇತರ ಸಂಘಟನೆಗಳು) ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಏಮ್ಸ್ ಪಡೆಯುವುದು ನಮ್ಮ ಪರಮಗುರಿ ಎಂದು ರಾಯಚೂರು ಜಂಟಿ ಕ್ರಿಯಾ ಸಮಿತಿ ಘೋಷಿಸಿದೆ. ಸಮಿತಿ ನಡೆಸುವ ಎಲ್ಲಾ ರೀತಿಯ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ತಿಳಿಸಿದರು.


ರಾಯಚೂರು ನಲ್ಲಿಯೇ ಏಮ್ಸ್ ಸ್ಥಾಪಿಸಬೇಕು. ಇದಕ್ಕೆ ಎಲ್ಲಾ ರಾಜಕೀಯ ಪಕ್ಷಗಳು ರಾಜಕೀಯ ರಹಿತವಾಗಿ ಬೆಂಬಲ ಸೂಚಿಸಬೇಕು. ಜಿಲ್ಲೆಯ ಎಲ್ಲಾ ಶಾಸಕರು, ಸಂಸದರು ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಮೇಲೆ ಒತ್ತಡ ತಂದು ಏಮ್ಸ್ ಅನ್ನು ಜಿಲ್ಲೆಯಲ್ಲಿಯೇ ಸ್ಥಾಪಿಸುವಂತೆ ಮಾಡಬೇಕು ಎಂದು ಅವರು ತಿಳಿಸಿದರು.

- Advertisement -


ಏಮ್ಸ್ ಸ್ಥಾಪನೆ ಮಾಡುವುದಕ್ಕೆ ರಾಯಚೂರು ಜಿಲ್ಲೆ ಅತ್ಯಂತ ಸೂಕ್ತ ಪ್ರದೇಶವಾಗಿದೆ. ಇದೇ ಸಂದರ್ಭದಲ್ಲಿ ರಾಯಚೂರು ಜಿಲ್ಲೆ ಎಲ್ಲಾ ರಂಗಗಳಲ್ಲೂ ಇಡೀ ದೇಶದಲ್ಲಿಯೇ ಹಿಂದುಳಿದಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ರಾಯಚೂರು ಜಿಲ್ಲೆಯನ್ನು ಮಹತ್ವಾಕಾಂಕ್ಷಿ ಜಿಲ್ಲೆ ಎಂದು ಘೋಷಿಸಿ ಸರ್ವಾಂಗೀಣ ಬೆಳವಣಿಗೆಗೆ ಪಣತೊಡಬೇಕಿದೆ ಎಂದು ಹೇಳಿದರು.
ಜಿಲ್ಲೆಗೆ ಏಮ್ಸ್ ಮಂಜೂರಾತಿ ವಿಷಯದಲ್ಲಿ ಜಿಲ್ಲೆಯ ಶಾಸಕ, ಸಂಸದ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿ , ರಾಜಕೀಯ ಇಚ್ಛಾಶಕ್ತಿಯಿಂದ ರಾಯಚೂರಿಗೆ ಏಮ್ಸ್ ಮಂಜೂರು ಮಾಡುವಂತೆ ಒತ್ತಾಯಿಸುತ್ತೇವೆ. ಪ್ರಸ್ತುತ ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ಬಸವರಾಜ್ ಬೊಮ್ಮಾಯಿ ಅವರು ನೂತನ ಮುಖ್ಯಮಂತ್ರಿಯಾಗಿದ್ದಾರೆ. ಅವರ ದೆಹಲಿಯ ಪ್ರಥಮ ಭೇಟಿಯ ಸಂದರ್ಭದಲ್ಲಿಯೇ ಪ್ರಧಾನ ಮಂತ್ರಿಯವರನ್ನು ಭೇಟಿ ಮಾಡಿ ಧಾರವಾಡಕ್ಕೆ ಏಮ್ಸ್ ಮಂಜೂರು ಮಾಡುವಂತೆ ಕೋರಿದ್ದಾರೆ. ಇದೊಂದು ಕುತಂತ್ರದ ಕೋರಿಕೆಯಾಗಿದ್ದು ಇದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ ಎಂದು ಅವರು ಹೇಳಿದರು.


ನಂಜುಂಡಪ್ಪ ವರದಿಯ ಪ್ರಕಾರ ಅತಿ ಹಿಂದುಳಿದಿರುವ ರಾಯಚೂರಿಗೆ ಐಐಟಿ ಸ್ಥಾಪಿಸಬೇಕಿತ್ತು. ಆದರೆ ಕುತಂತ್ರದಿಂದ ಅದನ್ನು ಬೇರೆ ಜಿಲ್ಲೆಗೆ ಮಂಜೂರು ಮಾಡಲಾಗಿದೆ. ಈ ಮಹಾದ್ರೋಹವನ್ನು ಜಿಲ್ಲೆಯ ಜನತೆ ಮರೆತಿಲ್ಲ. ಈ ಹಿನ್ನೆಲೆಯಲ್ಲಿಯೇ ಐಐಟಿ ಸ್ಥಾಪಿಸುವಲ್ಲಿ ವಂಚಿತಗೊಂಡ ರಾಯಚೂರಿನಲ್ಲಿ ಏಮ್ಸ್ ಸ್ಥಾಪಿಸಬೇಕೆಂಬುದು ನಮ್ಮ ಹೋರಾಟದ ಬೇಡಿಕೆಯಾಗಿದೆ ಎಂದರು.
371 ಜೆ ವಿರುದ್ಧದ ದಾವೆ ಹೂಡಿರುವ ನವೋದಯ ಶಿಕ್ಷಣ ಸಂಸ್ಥೆಯ ವಿರುದ್ಧ ಮುಂದಿನ ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಹಾಗೂ ಅವರಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಸರ್ಕಾರ ಈ ಭಾಗದ ಜನಪ್ರತಿನಿಧಿಗಳು ಎಲ್ಲಾ ಸಂಘಟನೆಗಳು ಸೇರಿಕೊಂಡು ಸಂಘಟನಾತ್ಮಕ ಹೋರಾಟವನ್ನು ಮುಂದುವರೆಸಲಾಗುವುದು ಎಂದ ನಗರ ಶಾಸಕರು ಶಿವರಾಜ್ ಪಾಟೀಲ್ ಏಮ್ಸ್ ಸ್ಥಾಪಿಸಿದಾಗ ಉದ್ಯೋಗ ಸೃಷ್ಟಿಯ ಕುರಿತು, ವಿದ್ಯಾರ್ಥಿಗಳಿಗೆ ಮೀಸಲಾತಿಯ ಕುರಿತು ಗಮನ ಹರಿಸದೇ ಇರುವುದು ವಿಷಾದನೀಯ ಎಂದು ಹೇಳಿದರು.


ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆಯಾಗಬೇಕು ಎಂಬ ಮಹತ್ವಕಾಂಕ್ಷಿ ಬೇಡಿಕೆ ಈಡೇರುವವರೆಗೆ ನಮ್ಮ ಜಿಲ್ಲೆಯ ಪ್ರತಿನಿಧಿಗಳನ್ನು ಜಾಗೃತಗೊಳಿಸಿ ಅವರ ರಾಜಕೀಯ ಶಕ್ತಿಯ ಪರಿಪೂರ್ಣ ಬೆಂಬಲದೊಂದಿಗೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲು ಮತ್ತು ನಿರಂತರ ಗೊಳಿಸಲು ಜಿಲ್ಲೆಯ ಎಲ್ಲಾ ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.




Join Whatsapp