►ವೀಡಿಯೋದಲ್ಲಿ ಬಹಿರಂಗವಾಯ್ತು ಕೈಚಳಕ !
ಮಂಗಳೂರು: ಕದ್ರಿ ಮಂಜುನಾಥ ಕ್ಷೇತ್ರದ ಹುಂಡಿಯ ದುಡ್ಡನ್ನು ಸರಕಾರದಿಂದ ನೇಮಕವಾದ ಮಹಿಳಾ ಟ್ರಸ್ಟಿಯೊಬ್ಬರು ತನ್ನ ಬ್ಲೌಸಿನೊಳಗೆ ಹಾಕಿದ ಘಟನೆ ಮಂಗಳೂರಿನಲ್ಲಿ ನಡೆದಿದ್ದು, ಈ ಕುರಿತ ವೀಡಿಯೋ ವೈರಲ್ ಆಗಿದೆ.
ಫೆ.24ರಂದು ದೇವಸ್ಥಾನದಲ್ಲಿ ಕಾಣಿಕೆ ಡಬ್ಬಿಯ ಹಣದ ಲೆಕ್ಕಾಚಾರ ನಡೆದಿತ್ತು. ಬಳಿಕ ಸಿಸಿ ಟಿವಿ ಪರಿಶೀಲಿಸಿದಾಗ ಅದರಲ್ಲಿ ಮಹಿಳಾ ಟ್ರಸ್ಟಿಯೊಬ್ಬರು 500 ರೂ. ನೋಟುಗಳನ್ನು ಬ್ಲೌಸ್ ಒಳಗೆ ತುರುಕಿಸುತ್ತಿರುವ ದೃಶ್ಯ ಕಂಡು ಬಂದಿತ್ತು.
ಈ ಕುರಿತು ವ್ಯವಸ್ಥಾಪನ ಆಡಳಿತ ಸಮಿತಿ ಸಭೆಯಲ್ಲಿ ಆರೋಪಿ ಮಹಿಳಾ ಟ್ರಸ್ಟಿ ರಾಜೀನಾಮೆ ನೀಡುವುದಾಗಿ ಒಪ್ಪಿದ್ದರು. ವಾರ ಕಳೆದರೂ ರಾಜೀನಾಮೆ ನೀಡದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಪ್ರತ್ಯಕ್ಷ ದರ್ಶಿಗಳು ಜಿಲ್ಲಾಡಳಿತಕ್ಕೆ ದೂರು ನೀಡಿದ್ದಾರೆ.
ಈ ಬಗ್ಗೆ ಸಚಿವ ವಿ ಸುನೀಲ್ ಕುಮಾರ್ ಪ್ರತಿಕ್ರಿಯಿಸಿ, ಈ ಕುರಿತು ಮಾಹಿತಿ ಬಂದಿಲ್ಲ. ಟ್ರಸ್ಟಿಗಳು ತಪ್ಪು ಮಾಡಿದ್ದು ನಿಜವಾದರೆ ರಕ್ಷಿಸುವ ಪ್ರಮೇಯವೇ ಇಲ್ಲ. ಅವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.
ಅಲ್ಲದೆ ವೀಡಿಯೋವನ್ನು ಸುನಿಲ್ ಬಜಿಲಕೇರಿ ಎಂಬವರು ಪೋಸ್ಟ್ ಮಾಡಿದ್ದು, ಮಂಜುನಾಥ ಕಾಪಾಡು ಎಂದು ಬರೆದುಕೊಂಡಿದ್ದಾರೆ.