ಕೇಂದ್ರೀಯ ವಿಶ್ವವಿದ್ಯಾನಿಲಯಗಳಲ್ಲಿ ಪದವಿ ಕೋರ್ಸ್‌ಗೆ ಪ್ರವೇಶ ಪರೀಕ್ಷೆ; ಯುಜಿಸಿ ಯ ಹೊಸ ಆದೇಶ

Prasthutha|

ಹೊಸದಿಲ್ಲಿ: ಕೇಂದ್ರೀಯ ವಿಶ್ವವಿದ್ಯಾನಿಲಯಗಳಲ್ಲಿ ಇನ್ನು ಮುಂದೆ ಪದವಿ ಕೋರ್ಸ್‌ಗೆ ಪ್ರವೇಶ ಪಡೆಯಲು  ವಿ.ವಿ.ಗಳು ನಡೆಸುವ ಪ್ರವೇಶ ಪರೀಕ್ಷೆಯ ಅಂಕಗಳನ್ನು ಆಧರಿಸಲಾಗುತ್ತದೆ. 12 ನೇ ತರಗತಿಯ ಅಂಕಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ (ಯುಜಿಸಿ) ಹೊಸ ಆದೇಶ ಹೊರಡಿಸಿದೆ.

- Advertisement -

ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಹಲವು ಬದಲಾವಣೆಗಳನ್ನು ತಂದಿರುವ ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ, ಎಲ್ಲ ಕೇಂದ್ರೀಯ ವಿ.ವಿ. ಗಳೂ ಕಡ್ಡಾಯವಾಗಿ ಸಾಮಾನ್ಯ ವಿಶ್ವ ವಿದ್ಯಾನಿಲಯ ಪ್ರವೇಶ ಪರೀಕ್ಷೆ(ಸಿಯುಇಟಿ) ನಡೆಸಿ, ಅದರ ಅಂಕಗಳ ಆಧಾರದಲ್ಲೇ ಪ್ರವೇಶ ನೀಡಬೇಕು ಎಂದು ಹೇಳಿದ್ದು, ಮುಂದಿನ ಶೈಕ್ಷಣಿಕ ವರ್ಷದಿಂದಲೇ(2022-23) ಇದು ಜಾರಿಯಾಗಲಿದೆ.

ಸಿಯುಇಟಿ ಎನ್ನುವುದು ಕಂಪ್ಯೂಟರೀಕೃತ ಪರೀಕ್ಷೆಯಾಗಿದ್ದು, ಕನ್ನಡ, ಇಂಗ್ಲಿಷ್‌, ಹಿಂದಿ, ಗುಜರಾತಿ, ಅಸ್ಸಾಮಿ, ಬಂಗಾಲಿ, ಮಲಯಾಳ, ಮರಾಠಿ, ಒಡಿಯಾ, ಪಂಜಾಬಿ, ತಮಿಳು, ತೆಲುಗು ಮತ್ತು ಉರ್ದು ಭಾಷೆಗಳಲ್ಲಿ ನಡೆಯಲಿದೆ. ವಿಶೇಷವೆಂದರೆ ವಿದೇಶಿ ವಿದ್ಯಾರ್ಥಿಗಳಿಗೆ ಈ ಪ್ರವೇಶ ಪರೀಕ್ಷೆಯಿಂದ ಯುಜಿಸಿ ವಿನಾಯಿತಿ ನೀಡಿದೆ.

- Advertisement -

ಯಾವುದಾದರೂ ವಿ.ವಿ.ಯು ಸ್ಥಳೀಯ ವಿದ್ಯಾರ್ಥಿಗಳಿಗೆ ನಿರ್ದಿಷ್ಟ ಪ್ರಮಾಣದಲ್ಲಿ ಮೀಸಲಾತಿ ನೀಡುತ್ತಾ ಬಂದಿದ್ದರೆ ಆ ಮೀಸಲಾತಿಯು ಮುಂದುವರಿಯಲಿದ್ದು,ಆದರೆ ಈ ವಿದ್ಯಾರ್ಥಿಗಳು ಕೂಡಾ ಸಿಯುಇಟಿ ಬರೆದೇ ಪ್ರವೇಶ ಪಡೆಯಬೇಕು.

ಕಡ್ಡಾಯವಾಗಿ ಎಲ್ಲ 45 ಕೇಂದ್ರೀಯ ವಿ.ವಿ.ಗಳು ಇನ್ನು ಯುಜಿ ಕೋರ್ಸ್‌ಗಳಿಗೆ ಸಿಯುಇಟಿ ಪರೀಕ್ಷೆ ನಡೆಸಬೇಕು. ಆದರೆ ಸದ್ಯದ ಮಟ್ಟಿಗೆ ಸ್ನಾತಕೋತ್ತರ ಪ್ರವೇಶದ ವೇಳೆ ಸಿಯುಇಟಿ ಅಂಕಗಳ ಪರಿಗಣನೆಯನ್ನು ಆಯಾ ವಿ.ವಿ.ಗಳ ವಿವೇಚನೆಗೆ ಬಿಡಲಾಗಿದೆ ಎಂದು ಯುಜಿಸಿ ಅಧ್ಯಕ್ಷ ಎಂ. ಜಗದೀಶ್‌ ಕುಮಾರ್‌ ಹೇಳಿದ್ದಾರೆ.



Join Whatsapp