ರಾಷ್ಟ್ರೀಯ ಹೆದ್ದಾರಿಗಳಲ್ಲಿನ 60 ಕಿಲೋಮೀಟರ್ ಒಳಗಿನ ಒಂದಕ್ಕಿಂತ ಹೆಚ್ಚು ಟೋಲ್ ಬೂತ್’ಗಳನ್ನು ಮುಚ್ಚಲು ಸೂಚನೆ

Prasthutha|

ನವದೆಹಲಿ: ರಾಷ್ಟ್ರೀಯ ಹೆದ್ದಾರಿಗಳಲ್ಲಿ 60 ಕಿಲೋಮೀಟರ್ ಅಂತರದಲ್ಲಿ ಒಂದಕ್ಕಿಂತ ಹೆಚ್ಚಿರುವ ಟೋಲ್ ಸಂಗ್ರಹಣಾ ಕೇಂದ್ರಗಳನ್ನು ಮುಂದಿನ ಮೂರು ತಿಂಗಳ ಒಳಗಾಗಿ ಮುಚ್ಚಲಾಗುವುದು ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಲೋಕಸಭೆಯಲ್ಲಿ ತಿಳಿಸಿದ್ದಾರೆ.
ಮುಂದಿನ ಹಣಕಾಸು ವರ್ಷದಲ್ಲಿ ರಸ್ತೆಗಳು ಮತ್ತು ಹೆದ್ದಾರಿಗಳಿಗೆ ಬಜೆಟ್‌ನ ಹಂಚಿಕೆಯ ಮೇಲಿನ ಚರ್ಚೆಗೆ ಉತ್ತರಿಸುವ ವೇಳೆ, ’60 ಕಿಲೋಮೀಟರ್ ಅಂತರದಲ್ಲಿ ಕೇವಲ ಒಂದು ಟೋಲ್ ಸಂಗ್ರಹ ಕೇಂದ್ರ ಇರಲಿದೆ ಎಂದು ಸಚಿವರು ಹೇಳಿದ್ದಾರೆ.

- Advertisement -


ಎರಡು ಟೋಲ್ ಪ್ಲಾಜಾಗಳ ನಡುವಿನ ಅಂತರದ ಕುರಿತು ಸಾಕಷ್ಟು ದೂರುಗಳು ಬಂದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಗಳಲ್ಲಿನ ಎರಡು ಟೋಲ್ ಪ್ಲಾಜಾಗಳ ನಡುವೆ ಕನಿಷ್ಠ 60 ಕಿ.ಮೀ ಅಂತರ ಇರುವಂತೆ ನೋಡಿಕೊಳ್ಳುತ್ತೇವೆ” ಎಂದು ಸಚಿವರು ಹೇಳಿದರು.
ಹೆದ್ದಾರಿಗಳಲ್ಲಿ ಸುಗಮ ಸಂಚಾರಕ್ಕಾಗಿ ಟೋಲ್ ಪ್ಲಾಜಾಗಳ ಬಳಿ ಇರುವ ಸ್ಥಳೀಯ ನಿವಾಸಿಗಳಿಗೆ ಅವರ ಆಧಾರ್ ಕಾರ್ಡ್ ವಿಳಾಸವನ್ನು ಆಧರಿಸಿ ಸರ್ಕಾರ ಉಚಿತ ಪಾಸ್‌ಗಳನ್ನು ನೀಡುಲಿದೆ. ಅಸ್ತಿತ್ವದಲ್ಲಿರುವ ನಿಯಮದ ಪ್ರಕಾರ, ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಪ್ಲಾಜಾಗಳ 20 ಕಿಮೀ ವ್ಯಾಪ್ತಿಯೊಳಗೆ ವಾಸಿಸುವ ವಾಹನ ಮಾಲೀಕರು ಅರ್ಜಿಗಳನ್ನು ಸಲ್ಲಿಸಿದ ನಂತರ ಅಗತ್ಯ ದಾಖಲೆಗಳೊಂದಿಗೆ ಟೋಲ್ ತೆರಿಗೆ ಪಾವತಿಯಿಂದ ವಿನಾಯಿತಿ ಪಡೆಯಬಹುದು. ಆಧಾರ್ ಕಾರ್ಡ್ ಅನ್ನು ವಿಳಾಸ ಪುರಾವೆಯಾಗಿ ಪರಿಗಣಿಸಲಾಗುತ್ತದೆ ಎಂದು ಸಚಿವರು ಹೇಳಿದ್ದಾರೆ.
8 ಪ್ರಯಾಣಿಕರ ಸಾಮಾರ್ಥ್ಯವನ್ನು ಹೊಂದಿರುವ ಮೋಟಾರು ವಾಹನಗಳಲ್ಲಿ ಪ್ರಯಾಣಿಕರ ಸುರಕ್ಷತೆಯನ್ನು ಹೆಚ್ಚಿಸಲು, ಸರ್ಕಾರವು 6 ಏರ್‌ಬ್ಯಾಗ್‌ಗಳನ್ನು ಕಡ್ಡಾಯಗೊಳಿಸಿದೆ ಎಂದು ಸಚಿವರು ಇದೇ ವೇಳೆ ಹೇಳಿದರು.



Join Whatsapp