ಮಾರ್ಚ್ 28 -29 ರಂದು ಅಖಿಲ ಭಾರತ ಸಾರ್ವತ್ರಿಕ ಮುಷ್ಕರ: ಯಶಸ್ವಿಗೆ ಬೀಡಿ ಕಾರ್ಮಿಕರ ಮಹಾಸಭೆ ನಿರ್ಧಾರ

Prasthutha|

ಮಂಗಳೂರು: ಸರಕಾರಗಳ ಜನವಿರೋಧಿ ನೀತಿಗಳನ್ನು ಪ್ರತಿಭಟಿಸಿ, ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಭಾರತ ಉಳಿಸಿ - ಜನತೆಯನ್ನು ರಕ್ಷಿಸಿ’ ಘೋಷಣೆಯೊಂದಿಗೆ ಮಾರ್ಚ್ 28 ಹಾಗೂ 29 ರಂದು ನಡೆಸಲು ಉದ್ದೇಶಿಸಿರುವ ಅಖಿಲಭಾರತ ಸಾರ್ವತ್ರಿಕ ಮುಷ್ಕರವನ್ನು ಯಶಸ್ವಿಗೊಳಿಸಲು ಬೀಡಿ ಕಾರ್ಮಿಕರ ಮಹಾಸಭೆ ತೀರ್ಮಾನಿಸಿದೆ

- Advertisement -

ಎಸ್. ಚಂದಪ್ಪ ಅಂಚನ್ ಸಭಾಂಗಣ ಹಾಗೂ ಎಂ. ಶಿವಪ್ಪ ಕೋಟ್ಯಾನ್ ವೇದಿಕೆಯಲ್ಲಿ (ಮಂಗಳೂರು ಕೊಡಿಯಾಲ್ ಬೈಲ್ ನಲ್ಲಿರುವ ಸಿಬಿಇಎ ಸಭಾಂಗಣ) ಇಂದು ನಡೆದ ಎಐಟಿಯುಸಿ ನೇತೃತ್ವದ ಬೀಡಿ ಎಂಡ್ ಟೊಬೆಕ್ಕೊ ಲೇಬರ್ ಯೂನಿಯನ್ನ 86 ನೇ ವಾರ್ಷಿಕ ಮಹಾಸಭೆಯಲ್ಲಿ ಈ ನಿರ್ಣಯವನ್ನು ಅಂಗೀಕರಿಸಲಾಯಿತು. ಮಾರ್ಚ್ 28 ರಂದು ತಾಲೂಕು ಕೇಂದ್ರಗಳಲ್ಲಿ ನಡೆಯುವ ಮುಷ್ಕರದಲ್ಲಿ ಭಾಗವಹಿಸುವುದಲ್ಲದೆ ಮಾರ್ಚ್ 29 ರಂದು ಬೆಳಿಗ್ಗೆ 10 ಗಂಟೆಗೆ ಮಂಗಳೂರು ಜ್ಯೋತಿ ಟಾಕೀಸ್ ಬಳಿಯಿಂದ ಹೊರಡುವ ಜಾಥಾ ನಂತರ ದಕ ಜಿಲ್ಲಾಧಿಕಾರಿ ಕಚೇರಿಯೆದುರು ನಡೆಯುವ ಬಹಿರಂಗ ಪ್ರತಿಭಟನಾ ಪ್ರದರ್ಶನದಲ್ಲೂ ಭಾಗವಹಿಸಿ ಯಶಸ್ವಿಗೊಳಿಸಲು ಮಹಾಸಭೆ ತೀರ್ಮಾನಿಸಿದೆ ಎಂದು ಯೂನಿಯನ್ ಕಾರ್ಯದರ್ಶಿ ವಿ.ಎಸ್. ಬೇರಿಂಜ ತಿಳಿಸಿದ್ದಾರೆ.

ನಮ್ಮನ್ನಾಳುತ್ತಿರುವ ಸರಕಾರಗಳು ಕಾಯ್ದೆ, ಕಾನೂನುಗಳನ್ನು ತಿದ್ದುಪಡಿ ಮಾಡಿ ಜನಸಾಮಾನ್ಯರನ್ನು ಶೋಷಿಸುತ್ತಿವೆ. ಸ್ವಾತಂತ್ರ್ಯಾನಂತರ ಭಾರತೀಯರ ತೆರಿಗೆ ಹಣದಿಂದ ಸ್ಥಾಪಿಸಲ್ಪಟ್ಟು ದೇಶದ ಆರ್ಥಿಕತೆಗೆ, ಅಭಿವೃದ್ಧಿಗೆ ತನ್ನದೇ ಆದ ಮಹತ್ತರ ಕೊಡುಗೆಗಳನ್ನು ನೀಡುತ್ತಿರುವ ಸರಕಾರೀ ಸ್ವಾಮ್ಯದ ಸಾರ್ವಜನಿಕ ಆಸ್ತಿ ಉದ್ದಿಮೆಗಳನ್ನು ಮುಚ್ಚಲಾಗುತ್ತಿದೆ ಇಲ್ಲವೇ ಖಾಸಗೀಕರಿಸಲಾಗುತ್ತಿದೆ. ಕಾರ್ಮಿಕ ಕಾನೂನುಗಳನ್ನು ಮಾಲಕಪರವಾಗಿ ಬದಲಾಯಿಸಲಾಗುತ್ತಿದೆ. ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಹೆಚ್ಚುತ್ತಿರುವುದರಿಂದ ಇತರ ಎಲ್ಲಾ ಉತ್ಪನ್ನ, ಸೇವೆಗಳ ಬೆಲೆ ನಿಯಂತ್ರಣವಿಲ್ಲದೆ ಏರುತ್ತಿದೆ.

- Advertisement -

ಕೋಮು ಭಾವನೆಯನ್ನು ಕೆರಳಿಸಿ ಜನಸಾಮಾನ್ಯರ ನಿಜವಾದ ಸಮಸ್ಯೆಗಳನ್ನು ಮರೆಮಾಚಲಾಗುತ್ತಿದೆ. ಕನಿಷ್ಠ ಮಜೂರಿಯಲ್ಲಿ ದುಡಿಯುತ್ತಿರುವ ಬೀಡಿ ಕಾರ್ಮಿಕರಿಗೆ ಪಾವತಿಸಬೇಕಾದ ತುಟ್ಟಿಭತ್ತೆ ಮತ್ತು ಕನಿಷ್ಠಕೂಲಿಯನ್ನು ಸರಿಯಾಗಿ ನೀಡದೆ ಶೋಷಿಸಲಾಗುತ್ತಿದೆ. ಕೋರ್ಟುಗಳಲ್ಲಿ ಪ್ರಶ್ನಿಸಿ, ವಿಳಂಬಿಸುತ್ತಾ ನಿಜವಾದ ಕಾರ್ಮಿಕರಿಗೆ ಸವಲತ್ತುಗಳು ಸಿಗದಂತೆ ಮಾಡಲಾಗುತ್ತಿದೆ. ಕೋಟ್ಪಾ ಕಾಯ್ದೆಯನ್ನು ಹೇರಿ ಬೀಡಿ ಕೈಗಾರಿಕೆಯನ್ನು ಮುಗಿಸಲು ಯತ್ನಿಸಲಾಗುತ್ತಿದೆ. ಬೀಡಿ ಮಾಲಕರುಗಳ ಇಂತಹ ಮನೋಭಾವಕ್ಕೆ ಪ್ರಸ್ತುತವಿರುವ ಬಂಡವಾಳಶಾಹಿಪರ ಸರಕಾರಗಳೇ ಕಾರಣವಾಗಿದೆ.

ಇಂತಹ ಸಂದರ್ಭದಲ್ಲಿ ಸರಕಾರಗಳ ನೀತಿಗಳನ್ನು ಪ್ರತಿಭಟಿಸಿ, ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿಭಾರತ ಉಳಿಸಿ – ಜನತೆಯನ್ನು ರಕ್ಷಿಸಿ’ ಘೋಷಣೆಯೊಂದಿಗೆ 2022 ಮಾರ್ಚ್ 28 ಹಾಗೂ 29 ರಂದು ನಡೆಯಲಿರುವ ಅಖಿಲಭಾರತ ಸಾರ್ವತ್ರಿಕ ಮುಷ್ಕರವನ್ನು ಯಶಸ್ವಿಗೊಳಿಸಲು ಬೀಡಿ ಕಾರ್ಮಿಕರ ಮಹಾಸಭೆ ತೀರ್ಮಾನಿಸಿದೆ ಎಂದು ವಿ.ಎಸ್. ಬೇರಿಂಜ ಮಾಹಿತಿ ನೀಡಿದ್ದಾರೆ.
ಮಹಾಸಭೆಯ ಅಧ್ಯಕ್ಷತೆಯನ್ನು ಯೂನಿಯನ್ನ ಅಧ್ಯಕ್ಷೆ ಸುಲೋಚನಾ ಹರೀಶ್ ಕವತ್ತಾರು ವಹಿಸಿದ್ದರು. ಬ್ಯಾಂಕ್ ನೌಕರರ ಸಂಘಟನೆಯ ಮುಖ್ಯಸ್ಥರಾದ ವಿನ್ಸೆಂಟ್ ಡಿ’ಸೋಜ, ಮಹಾಸಭೆಗೆ ಆಗಮಿಸಿ ಮುಷ್ಕರವನ್ನು ಯಶಸ್ವಿಗೊಳಿಸುವಂತೆ ಕರೆ ನೀಡಿದರು.

ಸಿಪಿಐ ಜಿಲ್ಲಾ ಕಾರ್ಯದರ್ಶಿ ವಿ.ಕುಕ್ಯಾನ್, ಎಐಟಿಯುಸಿ ಜಿಲ್ಲಾಧ್ಯಕ್ಷರಾದ ಹೆಚ್.ವಿ ರಾವ್, ಬೀಡಿ ನೌಕರರ ಸಂಘಟನೆಯ ಮುಂದಾಳು ತಿಮ್ಮಪ್ಪ ಕಾವೂರು, ಎಐಟಿಯುಸಿ ಜಿಲ್ಲಾ ಉಪಾಧ್ಯಕ್ಷರಾದ ಬಿ.ಶೇಖರ್, ಸಹಾಯಕ ಕಾರ್ಯದರ್ಶಿ ಸುರೇಶ್ ಕುಮಾರ್ ಬಂಟ್ವಾಳ್, ಯೂನಿಯನ್ ಕೋಶಾಧಿಕಾರಿ ಕರುಣಾಕರ್ ಮಾರಿಪಲ್ಲ ಮುಂತಾದವರು ಸಾಂದರ್ಭಿಕವಾಗಿ ಮಾತನಾಡಿದರು. ವರದಿ ಮತ್ತು ಲೆಕ್ಕ ಪತ್ರವನ್ನು ಅಂಗೀಕರಿಸಿದ ಮಹಾಸಭೆ ಹಲವಾರು ನಿರ್ಣಯಗಳನ್ನು ತೆಗೆದುಕೊಂಡು ಮುಂದಿನ ದಿನಗಳಲ್ಲಿ ಅದರ ಸಾಧನೆಗಾಗಿ ಕಾರ್ಯಯೋಜನೆಗಳನ್ನು ಹಾಕಿಕೊಳ್ಳಲು ತೀರ್ಮಾನಿಸಿತು. ಯೂನಿಯನ್ ಕಾರ್ಯದರ್ಶಿ ವಂದಿಸಿದರು.




Join Whatsapp