ಬೆಂಗಳೂರು: ದಿವಂಗತ ಪುನೀತ್ ರಾಜ್ಕುಮಾರ್ ಅವರ ನಟನೆಯ ಜೇಮ್ಸ್ ಚಿತ್ರ ಪ್ರದರ್ಶನ ಸ್ಥಗಿತಗೊಳಿಸುವಂತೆ ಬಿಜೆಪಿ ಶಾಸಕರು ಹುನ್ನಾರ ನಡೆಸುತ್ತಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ವಿಧಾನಸೌಧದ ಮೊಗಸಾಲೆಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಿನ್ನೆ ಜೇಮ್ಸ್ ಚಿತ್ರದ ನಿರ್ಮಾಪಕ ಕಿಶೋರ್ ನನ್ನನ್ನು ಭೇಟಿಯಾಗಿ, ಅನೇಕ ಕಡೆಗಳಲ್ಲಿ ಬಿಜೆಪಿ ಶಾಸಕರು, ಕಾರ್ಯಕರ್ತರು ಜೇಮ್ಸ್ ಚಿತ್ರ ಪ್ರದರ್ಶನ ನಡೆಯುತ್ತಿರುವ ಸಿನೆಮಾ ಮಂದಿರಕ್ಕೆ ಹೋಗಿ ನೀವು ಜೇಮ್ಸ್ ಚಿತ್ರ ಪ್ರದರ್ಶನ ನಿಲ್ಲಿಸಿ, ಕಾಶ್ಮೀರಿ ಫೈಲ್ಸ್ ಚಿತ್ರ ಹಾಕಿ ಎಂದು ಒತ್ತಡ ಹೇರಿ ಕೆಲವೆಡೆ ಜೇಮ್ಸ್ ಚಿತ್ರ ಪ್ರದರ್ಶನ ನಿಲ್ಲಿಸಿದ್ದಾರೆ, ಇದೇ ರೀತಿ ಇನ್ನೂ ಹಲವಾರು ಕಡೆ ಒತ್ತಡ ಹಾಕುತ್ತಿದ್ದಾರೆ ಎಂದು ನೋವು ತೋಡಿಕೊಂಡರು.
ಜೇಮ್ಸ್ ನಿರ್ಮಾಪಕರು ಚಿತ್ರ ಬಿಡುಗಡೆಗೆ ಮೊದಲೇ ಚಿತ್ರಮಂದಿರಗಳನ್ನು ಬುಕ್ ಮಾಡಿ, ಅವರಿಗೆ ಮುಂಗಡ ಹಣ ಪಾವತಿಸಿ ಬಿಡುಗಡೆ ಮಾಡಿದ್ದರು, ಈಗ ಬಿಜೆಪಿಯವರು ಕಾಶ್ಮೀರಿ ಫೈಲ್ಸ್ ಗಾಗಿ ಜೇಮ್ಸ್ ಚಿತ್ರ ನಿಲ್ಲಿಸಿ ಎಂದು ಬಲವಂತ ಮಾಡುತ್ತಿರುವುದು ದೌರ್ಜನ್ಯವಾಗುತ್ತದೆ ಎಂದರು.
ಪುನೀತ್ ರಾಜ್ಕುಮಾರ್ ಒಬ್ಬ ಸಮಾಜಮುಖಿ, ಪ್ರತಿಭಾನ್ವಿಂತ ನಟರಾಗಿದ್ದವರು. ಅವರಿಗೆ ರಾಜ್ಯದಲ್ಲಿ ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳಿದ್ದಾರೆ, ಅವರ ಕೊನೆ ಚಿತ್ರವನ್ನು ವೀಕ್ಷಿಸಬೇಕು ಎಂದು ಅವರ ಎಲ್ಲಾ ಅಭಿಮಾನಿಗಳಿಗೆ ಆಸೆ ಇದೆ. ಹೀಗಾಗಿ ಜೇಮ್ಸ್ ಚಿತ್ರ ಸ್ಥಗಿತಗೊಳಿಸುವ ಬಿಜೆಪಿ ಶಾಸಕರ ಯತ್ನಕ್ಕೆ ನನ್ನ ವಿರೋಧವಿದೆ. ಬಿಜೆಪಿಯವರು ತಮ್ಮನ್ನು ಸಜ್ಜನರು ಎಂದು ಹೇಳಿಕೊಂಡು ಮಾಡುವುದು ಇಂಥಾ ದೌರ್ಜನ್ಯದ ಕೆಲಸ. ಚಿತ್ರ ಪ್ರದರ್ಶನಕ್ಕೆ ಅಡ್ಡಿ ಮಾಡ್ತಿರುವ ಶಾಸಕರ ಜೊತೆ ನಾನು ಮಾತನಾಡ್ತೇನೆ.
ಯಾವೆಲ್ಲಾ ಟಾಕೀಸುಗಳು ಬುಕ್ ಆಗಿವೆ ಅಲ್ಲಿ ಸಿನಿಮಾ ತೋರಿಸಿ ಎಂದು ನಿಸಿಮಾ ನಿರ್ಮಾಪಕರಿಗೆ ಹೇಳಿದ್ದೇನೆ ಎಂದರು.
ಆಸಕ್ತಿ ಇದ್ದವರು ಕಾಶ್ಮೀರಿ ಫೈಲ್ಸ್ ಸಿನಿಮಾ ನೋಡಲಿ, ನಮ್ಮದೇನು ವಿರೋಧ ಇಲ್ಲ. ಆದರೆ ಒಂದು ಸಿನಿಮಾ ಸ್ಥಗಿತಗೊಳಿಸಿ ಇನ್ನೊಂದು ಚಿತ್ರ ನೋಡಿ ಎಂದು ಜನರ ಮೇಲೆ ಒತ್ತಡ ಹಾಕೋದು ಸರಿಯಲ್ಲ. ಹಿಂದೆ ಮಹಾತ್ಮ ಗಾಂಧಿ ಕುರಿತಾದ ಸಿನೆಮಾ ಬಂದಿತ್ತು, ಸಾಮಾಜಿಕ ಕಳಕಳಿಯ ಜೈ ಭೀಮ್ ಸಿನಿಮಾ ಬಂತು ನಾವ್ಯಾರಾದ್ರೂ ಇತರರ ಮೇಲೆ ಸಿನಿಮಾ ನೋಡುವಂತೆ ಒತ್ತಡ ಹಾಕಿದ್ವ? ಆಸಕ್ತಿ ಇದ್ದವರು ನೋಡ್ತಾರೆ.
ಜೇಮ್ಸ್ ಸಿನಿಮಾ ಪುನೀತ್ ರಾಜ್ ಕುಮಾರ್ ಅವರ ಕೊನೆಯ ಸಿನಿಮಾ. ಇದಕ್ಕೂ ಕೂಡ ತೆರಿಗೆ ವಿನಾಯಿತಿ ನೀಡಬೇಕಿತ್ತು, ಇನ್ನಾದರೂ ಚಿತ್ರದ ಮೇಲೆ ತೆರಿಗೆ ರದ್ದು ಮಾಡಿ ಇನ್ನೂ ಹೆಚ್ಚು ಜನರಿಗೆ ನೋಡಲು ಸರ್ಕಾರ ಅವಕಾಶ ಮಾಡಿಕೊಡಲಿ ಎಂದು ಸಿದ್ದರಾಮಯ್ಯ ತಿಳಿಸಿದರು.