ಜಾತ್ರೆಗಳಲ್ಲಿ ಹಿಂದೂಯೇತರರಿಗೆ ವ್ಯಾಪಾರಕ್ಕೆ ಅವಕಾಶ ನೀಡದಿರುವ ಬಗ್ಗೆ ಮಂಗಳೂರು ಕಮಿಷನರ್ ಹೇಳಿದ್ದೇನು?

Prasthutha|

ಮಂಗಳೂರು: ಬಪ್ಪನಾಡು ಶ್ರೀ ಜಾತ್ರಾ ಮಹೋತ್ಸವದಲ್ಲಿ ಆಡಳಿತ ಮಂಡಳಿ ಹಿಂದೂಯೇತರರಿಗೆ ಜಾತ್ರೋತ್ಸವದಲ್ಲಿ ವ್ಯಾಪಾರಕ್ಕೆ ಅವಕಾಶ ಇಲ್ಲ ಎಂದು ಹಾಕಿರುವ ಫ್ಲೆಕ್ಸ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಕ್ರಮ ಕೈಗೊಳ್ಳಲಿದೆ ಎಂದು ಕಮಿಷನರ್ ಶಶಿಕುಮಾರ್ ತಿಳಿಸಿದ್ದಾರೆ.

- Advertisement -


ಈ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿದ ಶಶಿಕುಮಾರ್, ಕರಾವಳಿಯ ಮಂಗಳಾದೇವಿ ದೇವಸ್ಥಾನ, ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನ ಸೇರಿದಂತೆ ಕೆಲವು ದೇವಸ್ಥಾನಗಳ ಜಾತ್ರೋತ್ಸವದಲ್ಲಿ ಹಿಂದೂಯೇತರರಿಗೆ ವ್ಯಾಪಾರಕ್ಕೆ ಅವಕಾಶ ಇಲ್ಲ ಎಂಬ ಬ್ಯಾನರ್ ಅಳವಡಿಸಲಾಗಿದೆ. ಅಲ್ಲದೇ ಅಲ್ಲಿ ಸಂವಿಧಾನಕ್ಕೆ ವಿರುದ್ಧವಾದವರಿಗೆ, ಗೋ ಕಟುಕರಿಗೆ ವ್ಯಾಪಾರಕ್ಕೆ ಅವಕಾಶ ಇಲ್ಲ ಎಂಬ ಬ್ಯಾನರ್ ಹಾಕಲಾಗಿದೆ ಎಂದರು.


ಈ ಸಂಬಂಧ ದೇವಸ್ಥಾನದ ಆಡಳಿತ ಮಂಡಳಿ, ತಹಶೀಲ್ದಾರ್ ಗಮನಕ್ಕೆ ತಂದಿದ್ದೇವೆ. ಬ್ಯಾನರ್ ಯಾರು ಹಾಕಿದ್ದಾರೆ ಎಂಬುದರ ಬಗ್ಗೆ ತನಿಖೆ ಮಾಡುತ್ತೇವೆ. ಆಡಳಿತ ಮಂಡಳಿ ಈ ಬಗ್ಗೆ ದೂರು ನೀಡಿದರೆ ಕಾನೂನು ಕ್ರಮ ಕೈಗೊಳ್ಳುತ್ತೇವೆ, ಈ ಬಗ್ಗೆ ಕಾನೂನು ತಜ್ಞರ ಬಳಿ ಮಾಹಿತಿ ಕೇಳಿದ್ದೇವೆ ಎಂದು ಹೇಳಿದ್ದಾರೆ.

- Advertisement -

ಬಪ್ಪನಾಡು ಆಡಳಿತ ಮಂಡಳಿ ಜೊತೆ ಮಾತನಾಡುವ ಸಂದರ್ಭ ಅವರು ತಮ್ಮ ದೇವಸ್ಥಾನದಲ್ಲಿ ನಿಯಮದ ಪ್ರಕಾರ ಹಿಂದೂಯೇತರರಿಗೆ ವ್ಯಾಪಾರಕ್ಕೆ ಅವಕಾಶ ಇಲ್ಲ ಎಂದಿದ್ದಾರೆ. ಆದರೆ ಅದು ಅಧಿಕೃತವಾಗಿ ಎಲ್ಲೂ ಇಲ್ಲ. ದೇವಸ್ಥಾನಗಳ ನಿಯಮದ ಬಗ್ಗೆ ಸಂಬಂಧಪಟ್ಟ ಇಲಾಖೆಗಳು ಕ್ರಮ ಕೈಗೊಳ್ಳುತ್ತವೆ. ಕಾನೂನು ಉಲ್ಲಂಘನೆಯಾದಲ್ಲಿ ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ಸ್ಪಷ್ಪಪಡಿಸಿದರು.




Join Whatsapp