ಬೆಂಗಳೂರು: ಕೇಂದ್ರ ಸರಕಾರವು ಮೇಲಿಂದ ಮೇಲೆ ಬೆಲೆ ಏರಿಕೆ ಮಾಡುತ್ತಿರುವುದರಿಂದ ಜನರೇ ಅದಕ್ಕೆ ಹೊಂದಿಕೊಂಡು ಬಿಟ್ಟಿದ್ದಾರೆ. ಹೀಗಾಗಿ ಬೆಲೆ ಏರಿಕೆ ಎನ್ನುವುದು ನಿರಂತರ ಎನ್ನುವಂತೆ ಆಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ವಿಧಾನಸೌಧದ ಬಳಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಅವರು, ಕೇಂದ್ರ ಸರಕಾರ ಮತ್ತೆ ಅಡುಗೆ ಅನಿಲ ಮತ್ತು ತೈಲ ಬೆಳೆಗಳನ್ನು ಏರಿಕೆ ಮಾಡಿದ ಬಗ್ಗೆ ಮಾತನಾಡಿದರು.
2018ರಲ್ಲಿ ನಾನು ಮುಖ್ಯಮಂತ್ರಿ ಆಗಿದ್ದಾಗ ಸಾಲ ಮನ್ನಾ ಮಾಡಲಿಕ್ಕೆ ಪೆಟ್ರೋಲ್ ಲೀಟರಿಗೆ 1.12 ಪೈಸೆ, ಮತ್ತು ಡೀಸೆಲ್ ಬೆಲೆಯಲ್ಲಿ ಲೀಟರಿಗೇ 1.14 ಪೈಸೆ ಹೆಚ್ಚಳ ಮಾಡಿದ್ದಕ್ಕೆ ಬಿಜೆಪಿ ಕೂಗಾಡಿ ಗಲಾಟೆ ಮಾಡಿದರು. ಈಗ ನೋಡಿದರೆ ಅವರು ಸುಮ್ಮನಿದ್ದಾರೆ. ಜನರೂ ಪ್ರಶ್ನೆ ಮಾಡುತ್ತಿಲ್ಲ ಎಂದರು ಅವರು.
ನಿರಂತರವಾಗಿ ಬೆಲೆ ಏರಿಕೆ ಮಾಡುತ್ತಿದ್ದರೂ ಜನ ಸುಮ್ಮನಿದ್ದಾರೆ. ಬಿಜೆಪಿ ನಾಯಕರೂ ಜಾಣ ಮೌನ ವಹಿಸಿದ್ದಾರೆ. ಸೂಕ್ಷ್ಮ ವಿಷಯಗಳತ್ತ ವಿಷಯಾಂತರ ಮಾಡಿ ಬೆಲೆ ಏರಿಕೆ ವಿಷಯವನ್ನು ಮರೆಮಾಚುತ್ತಿದ್ದಾರೆ ಎಂದು ಅವರು ಟೀಕಿಸಿದರು.