ಬೆಂಗಳೂರು: ಆದಾಯಕ್ಕೂ ಮೀರಿ ಆಸ್ತಿ ಗಳಿಸಿದ ಆರೋಪದಲ್ಲಿ ವಸತಿ ಸಚಿವ ವಿ. ಸೋಮಣ್ಣ ವಿರುದ್ಧ ಸಮನ್ಸ್ ಜಾರಿ ಮಾಡಲಾಗಿದೆ.
ಮುಂದಿನ ತಿಂಗಳು ಏಪ್ರಿಲ್ 16ಕ್ಕೆ ಖುದ್ದು ವಿಚಾರಣೆಗೆ ಹಾಜರಾಗುವಂತೆ ಜನಪ್ರತಿನಿಧಿಗಳ ನ್ಯಾಯಾಲಯ ಆದೇಶ ನೀಡಿದೆ. ಇದು 8-9 ವರ್ಷಗಳ ಹಿಂದಿನ ಪ್ರಕರಣವಾಗಿದ್ದು, 2013ರಲ್ಲಿ ರಾಮಕೃಷ್ಣ ಎಂಬವವರು ಸಚಿವ ಸೋಮಣ್ಣ ವಿರುದ್ಧ ಆದಾಯಕ್ಕೂ ಮೀರಿ ಆಸ್ತಿ ಗಳಿಸಿದ್ದಾರೆ ಎಂದು ಖಾಸಗಿ ದೂರು ದಾಖಲಿಸಿದ್ದರು.
ಲೋಕಾಯುಕ್ತ ಪೊಲೀಸರಿಗೆ ಈ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಕೋರ್ಟ್ ಸೂಚಿಸಿತ್ತು. ಆದರೆ, ಲೋಕಾಯುಕ್ತ ಪೊಲೀಸರು ಆದಾಯ ಮೀರಿ ಆಸ್ತಿ ಗಳಿಸಿಲ್ಲವೆಂದು ವರದಿ ನೀಡಿದ್ದರು. ಲೋಕಾಯುಕ್ತ ಪೊಲೀಸರ ರಿಪೋರ್ಟ್ನ್ನು ಕೋರ್ಟ್ ತಿರಸ್ಕರಿಸಿತ್ತು. ಹೀಗಾಗಿ ಅಸಮರ್ಪಕ ತನಿಖೆ ಎಂದು ಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿ ಸಮನ್ಸ್ ಜಾರಿ ಮಾಡಿದೆ.