ಹಿಜಾಬ್ ವಿಚಾರದಲ್ಲಿ ಸರ್ಕಾರದ ನಿರ್ಧಾರವನ್ನೇ ಹೈಕೋರ್ಟ್ ಎತ್ತಿ ಹಿಡಿದಿರುವುದು ದುರದೃಷ್ಟಕರ: ಬೃಂದಾ ಕಾರಟ್

Prasthutha|

ದ್ವಿರಾಷ್ಟ್ರ ಸಿದ್ಧಾಂತ ಮೊದಲು ಪ್ರತಿಪಾದಿಸಿದ್ದೇ ವಿಡಿ ಸಾವರ್ಕರ್

- Advertisement -

ಮಂಗಳೂರು: ಹಿಜಾಬ್ ಅನ್ನೋದು ಹೆಣ್ಣು ಮಕ್ಕಳ ಆಯ್ಕೆಯ ವಿಚಾರ. ಆದರೆ ಕರ್ನಾಟಕ ರಾಜ್ಯದ ಬಿಜೆಪಿ ಸರಕಾರ ಹಿಜಾಬ್ ನಿಷೇಧಿಸಿರುವುದು ಖಂಡನೀಯ. ಸರಕಾರದ ನಿರ್ಧಾರವನ್ನೇ ಹೈಕೋರ್ಟ್ ಕೂಡಾ ಎತ್ತಿ ಹಿಡಿದಿರುವುದು ದುರದೃಷ್ಟಕರ ಎಂದು ಬೃಂದಾ ಕಾರಟ್ ಅಭಿಪ್ರಾಯಪಟ್ಟರು.

ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಸಿಪಿಐಎಂ ವತಿಯಿಂದ ನಡೆದ ‘ಸೌಹಾರ್ದ ಸಮಾವೇಶ’ದಲ್ಲಿ ಅವರು ಮಾತನಾಡಿದರು.

- Advertisement -

ಮುಸ್ಲಿಂ ಸಮುದಾಯದ ಹೆಣ್ಮಕ್ಕಳು ಎಲ್ಲ ಅಡೆತಡೆಗಳನ್ನು ಮೀರಿ ಶಿಕ್ಷಣದತ್ತ ಸಾಗಿ ಬಂದಿದ್ದಾರೆ. ಆದರೆ ಬಿಜೆಪಿ ಸರಕಾರ ಹಿಜಾಬ್ ನಿರ್ಬಂಧಿಸಿ ಏನು ಮಾಡಲು ಹೊರಟಿದೆ ಅನ್ನೋದರ ಬಗ್ಗೆ ಆತಂಕದಿಂದ ನೋಡುವಂತಾಗಿದೆ. ಕಾಲೇಜು ಅಭಿವೃದ್ಧಿ ಸಮಿತಿಗಳಲ್ಲಿ ಶಾಸಕರುಗಳಿಗೆ ಕೆಲಸವಾದರೂ ಏನು ಎಂದು ಪ್ರಶ್ನಿಸಿದ ಕಾರಟ್, ಉಡುಪಿಯಲ್ಲಿ ಶಾಸಕ ರಘುಪತಿ ಭಟ್ ಅವರೇ ಕೇಸರಿ ಶಾಲು ಹಂಚಿ ದ್ವೇಷದ ವಾತಾವರಣ ಮೂಡಿಸಲು ಕಾರಣರಾದರು ಎಂದು ಟೀಕಿಸಿದರು.

ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಕುರಿತು ಭಾಷಣ ಮಾಡುವ ಮೋದಿ ಹಾಗೂ ಅವರ ಪರಿವಾರದವರ ಸ್ವಾತಂತ್ರ್ಯ ಹೋರಾಟದಲ್ಲಿ ಪಾತ್ರವೇನು ಅನ್ನೋದನ್ನ ತಿಳಿಯಬೇಕಿದೆ. ಮೊದಲ ಬಾರಿಗೆ ದೇಶದಲ್ಲಿ ದ್ವಿರಾಷ್ಟ್ರ ಸಿದ್ಧಾಂತ ಪ್ರತಿಪಾದಿಸಿದ್ದೇ ವಿಡಿ ಸಾವರ್ಕರ್, ಆನಂತರ ಈ ಸಿದ್ಧಾಂತವನ್ನು ಮುಂದುವರೆಸಿದವರಾಗಿದ್ದಾರೆ ಮೊಹಮ್ಮದ್ ಅಲಿ ಜಿನ್ನಾ ಎಂದರು.

ಸಂವಿಧಾನ ಜಾರಿಯಾದಾಗ ಅದನ್ನ ವಿರೋಧಿಸಿದವರು ಈಗ ಸ್ವಾತಂತ್ರ್ಯ ಹೋರಾಟದ ಇತಿಹಾಸವನ್ನೇ ಹೈಜಾಕ್ ಮಾಡಲು ನೋಡುತ್ತಿದ್ದಾರೆ. ಅದಕ್ಕಾಗಿ ಬ್ರಿಟಿಷರಿಗೆ ಕ್ಷಮಾಪಣೆ ಪತ್ರ ಬರೆದವರನ್ನು ಹೀರೋಗಳನ್ನಾಗಿ ಮಾಡಲಾಗುತ್ತಿದೆ. ಆರ್ಎಸ್ಎಸ್ ಕೇವಲ ಅಲ್ಪಸಂಖ್ಯಾತರಿಗೆ ಮಾತ್ರವಲ್ಲ ದೇಶದ ಪ್ರತಿಯೊಬ್ಬ ನಾಗರಿಕನಿಗೂ ಮಾರಕ ಎಂದು ವಾಗ್ದಾಳಿ ನಡೆಸಿದರು.

ಕಾರ್ಯಕ್ರಮದಲ್ಲಿ ಮುನೀರ್ ಕಾಟಿಪಳ್ಳ, ಸುನಿಲ್ ಕುಮಾರ್ ಬಜಾಲ್, ಯಾದವ ಶೆಟ್ಟಿ, ಕೆ ಪ್ರಕಾಶ್, ಕೆ ನೀಲಾ, ವೈ ಗುರುಶಾಂತ್, ಬಾಲಕೃಷ್ಣ ಶೆಟ್ಟಿ ಉಡುಪಿ, ಯಮುನಾ ಗಾಂವ್ಕರ್, ಮಹಾಂತೇಶ್, ಪದ್ಮಾವತಿ ಶೆಟ್ಟಿ, ರಮಣಿ, ಜಯಂತಿ ಶೆಟ್ಟಿ, ಸದಾಶಿವ ದಾಸ್, ಡಾ‌. ಕೃಷ್ಣಪ್ಪ ಕೊಂಚಾಡಿ, ವಸಂತ ಆಚಾರಿ , ವಸಂತಿ ಕುಪ್ಪೆಪದವು ಉಪಸ್ಥಿತರಿದ್ದರು   




Join Whatsapp