ಹೊಸದಿಲ್ಲಿ: ಗಂಗಾ ನದಿಯ ಕೆಸರನ್ನು ಗೊಬ್ಬರವನ್ನಾಗಿ ಪರಿವರ್ತಿಸಿ, ಅವುಗಳನ್ನು ರಾಸಾಯನಿಕ ಗೊಬ್ಬರಗಳಿಗೆ ಪರ್ಯಾಯವಾಗಿ ಬಳಸುವಂತೆ ಮಾಡಿ ಆ ಮೂಲಕ ಸಾವಯವ ಕೃಷಿಗೆ ಉತ್ತೇಜನ ನೀಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದ್ದು, ರಾಸಾಯನಿಕಗಳು ನದಿಗೆ ಸೇರದಂತೆ ತಡೆಯುವ ನಿಟ್ಟಿನಲ್ಲಿ ಸರ್ಕಾರ ಯೋಜನೆ ರೂಪಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.
ಗಂಗಾ ನದಿಯ ಕೆಸರಿನ ನಿರ್ವಹಣೆಯ ಕುರಿತು ಕಳೆದ 2 ವಾರಗಳಿಂದ ಸತತ ಹಲವು ಸುತ್ತುಗಳ ಸಭೆ ನಡೆಯುತ್ತಿದ್ದು,ಬೇರೆ ಬೇರೆ ರೀತಿಯ ಯೋಜನೆಗಳ ಬಗ್ಗೆ ಚರ್ಚಿಸಲಾಗಿದೆ ಎಂದು ರಾಷ್ಟ್ರೀಯ ಸ್ವತ್ಛ ಗಂಗಾ ಯೋಜನೆ(ಎನ್‌ಎಂಸಿಜಿ) ಪ್ರಧಾನ ನಿರ್ದೇಶಕ ಅಶೋಕ್ ಕುಮಾರ್ ಹೇಳಿದ್ದಾರೆ.
ನದಿಯ ಕೆಸರನ್ನು ಸಂಸ್ಕರಿಸಿ ರೈತರಿಗೆ ಸಬ್ಸಿಡಿ ದರದಲ್ಲಿ ಒದಗಿಸುವ ಪ್ರಯತ್ನಗಳನ್ನು ಮಾಡಲಾಗುತ್ತಿದ್ದು, ಸಂಸ್ಕರಿತ ಕೆಸರು ರಸಗೊಬ್ಬರಕ್ಕೆ ಸಮಾನವಾಗಿರುತ್ತದೆ. ವಿಫುಲ ಫಾಸ್ಫರಸ್ ಮತ್ತು ಪೌಷ್ಟಿಕಾಂಶಗಳಿರುವ ಸಂಸ್ಕರಿತ ನೀರು ಬೆಳೆಗಳ ಬೆಳವಣಿಗೆಗೂ ಸಹಕಾರಿಯಾಗಿದೆ. ಹೀಗಾಗಿ, ರಸಗೊಬ್ಬರವಾಗಿ ಬಳಕೆಯಾಗುವಂಥ ಸಂಸ್ಕರಿತ ಕೆಸರನ್ನು ಉತ್ಪತ್ತಿ ಮಾಡಿ, ಅದನ್ನು ರೈತರಿಗೆ ಕಡಿಮೆ ದರದಲ್ಲಿ ನೀಡುವ ಕುರಿತು ಕಂಪನಿಗಳೊಂದಿಗೆ ಮಾತುಕತೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.
ಇದಕ್ಕೆ ಕಂಪನಿಗಳು ಒಪ್ಪಿದರೆ ನದಿಗಳಿಗೆ ಅಪಾಯಕಾರಿ ರಾಸಾಯನಿಕಗಳು ಸೇರುವುದನ್ನೂ ತಪ್ಪಿಸಿದಂತಾಗುತ್ತದೆ.ಇದರಿಂದ ಗಂಗಾ ನದಿ ಕೆಸರಿನಿಂದ ಮುಕ್ತಗೊಂಡು, ಸ್ವಚ್ಛಗೊಳ್ಳುತ್ತದೆ. ರೈತರು ರಾಸಾಯನಿಕಗಳ ಬದಲು ಸಾವಯವ ಗೊಬ್ಬರ ಬಳಸುವಂತಾಗುತ್ತದೆ. ಸಾವಯವ ಕೃಷಿಗೆ ಉತ್ತೇಜನ ಸಿಗಲಿದೆ ಎಂದೂ ಅವರು ತಿಳಿಸಿದ್ದಾರೆ.