ರಾಂಚಿ: ಮೂರು ತಿಂಗಳ ಹಿಂದೆ ಅಂಗೀಕರಿಸಲ್ಪಟ್ಟ ಗುಂಪುಹತ್ಯೆ ವಿರೋಧಿ ಕಾಯ್ದೆಯನ್ನು ಜಾರ್ಖಂಡ್ ರಾಜ್ಯಪಾಲ ರಮೇಶ್ ಬೈಸ್ ಅವರು ಸಹಿ ಮಾಡಲು ನಿರಾಕರಿಸಿ ಸರ್ಕಾರಕ್ಕೆ ಹಿಂದಕ್ಕೆ ಕಳುಹಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಜಾರ್ಖಂಡ್ ಅಸೆಂಬ್ಲಿಯು ಕಳೆದ ಡಿಸೆಂಬರ್ 12 ರಂದು ಗುಂಪು ಹಿಂಸಚಾರ ಮತ್ತು ಹತ್ಯೆ ಕಾಯ್ದೆ 2021 ಅನ್ನು ಅಂಗೀಕರಿಸಿತ್ತು.
ಈ ಮಧ್ಯೆ ಕಾಯ್ದೆಯನ್ನು ಹಿಂದಕ್ಕೆ ಕಳುಹಿಸಿರುವ ರಾಜ್ಯಪಾಲರು, ಗುಂಪು ಎಂಬ ಪದದ ವ್ಯಾಖ್ಯಾನವನ್ನು ಮರುಪರಿಶೀಲಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದ್ದಾರೆ ಎಂದು ಹೇಳಲಾಗಿದೆ.
ಬಿಜೆಪಿ ಶಾಸಕ ಅಮಿತ್ ಕುಮಾರ್ ಮಂಡಲ್ ಅವರು ಗುಂಪು ಎಂಬ ಪದವನ್ನು ಸರಿಯಾಗಿ ವ್ಯಾಖ್ಯಾನ ಮಾಡಿಲ್ಲ ಮತ್ತು ಅದನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆಯಿದೆ ಎಂದು ಹೇಳಿರುವ ಕುರಿತು ಮಾಧ್ಯಮಗಳು ವರದಿ ಮಾಡಿವೆ. ವಿಧೇಯಕವನ್ನು ಅಸೆಂಬ್ಲಿಯಲ್ಲಿ ಚರ್ಚೆ ನಡೆಸುತ್ತಿದ್ದಾಗ ಬಿಜೆಪಿ ಅದನ್ನು ವಿರೋಧಿಸಿ, ಸರ್ಕಾರ ಓಲೈಕೆಯ ರಾಜಕಾರಣ ಮಾಡಲು ಯತ್ನಿಸುತ್ತಿದೆ ಎಂದು ಆರೋಪಿಸಿತ್ತು.
ಈ ಬಗ್ಗೆ ಪ್ರತಿಕ್ರಿಯಿಸಿದ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರು ಬಿಜೆಪಿ ವಿನಾಕಾರಣ ಜನತೆಯಲ್ಲಿ ಗೊಂದಲ ಸೃಷ್ಟಿಸಲು ಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.
ನೂತನ ಈ ಕಾಯ್ದೆಯ ಅನ್ವಯ ಗುಂಪುಹತ್ಯೆಯಲ್ಲಿ ತೊಡಗಿಸಿಕೊಂಡ ವ್ಯಕ್ತಿಗೆ ಜೀವಾವಧಿ ಶಿಕ್ಷೆ ಮತ್ತು ಅಪರಾಧದ ತೀವ್ರತೆಗೆ ಅನುಸಾರವಾಗಿ ಕನಿಷ್ಠ 3 ಲಕ್ಷ ರೂ. ವರೆಗೆ ದಂಡ ವಿಧಿಸಬಹುದಾಗಿದೆ. ಗುಂಪುಹತ್ಯೆಯ ವೇಳೆಯ ವ್ಯಕ್ತಿಯೊಬ್ಬ ಮೃತಪಟ್ಟರೆ ಅಂತಹವರಿಗೆ 25 ಲಕ್ಷ ರೂ. ದಂಡ ವಿಧಿಸಬಹುದಾಗಿದೆ ಎಂದು ಹೇಳಲಾಗಿದೆ.
ಪ್ರಸಕ್ತ ಕಾಯ್ದೆಗೆ ರಾಜ್ಯಪಾಲರ ಅಂಗೀಕಾರ ಲಭಿಸಿದರೆ, ಪಶ್ಚಿಮ ಬಂಗಾಳ, ರಾಜಸ್ಥಾನ ಮತ್ತು ಮಣಿಪುರದ ಬಳಿಕ ಗುಂಪು ಹಿಂಸಾಚಾರದ ವಿರುದ್ಧ ಕಾನೂನನ್ನು ಅಂಗೀಕರಿಸಿದ ನಾಲ್ಕನೇ ರಾಜ್ಯವಾಗಿ ಜಾರ್ಖಂಡ್ ಆಗಲಿದೆ.