ಮಂಗಳೂರು: ಕಾಲೇಜು ಕ್ಯಾಂಪಸ್ ಬಳಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆ ವಿರುದ್ಧ ಕಾಲೇಜು ವಿದ್ಯಾರ್ಥಿಗಳು ಬೀದಿಗಿಳಿದು ಪ್ರತಿಭಟನೆ ನಡೆಸಿದ ಘಟನೆ ನಗರದ ಹೊರವಲಯದ ಕೊಣಾಜೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಇಲ್ಲಿನ ಇನೋಳಿಯಲ್ಲಿರುವ ಬ್ಯಾರೀಸ್ ಇನ್ಸ್ಟಿಟ್ಯೂಶನ್ ಆಫ್ ಟೆಕ್ನಾಲಜಿ ಕಾಲೇಜು ಸಮೀಪವೇ ಕೆಂಪು ಕಲ್ಲು ಗಣಿಗಾರಿಕೆ ಹಲವು ವರುಷಗಳಿಂದ ನಡೆಯುತ್ತಿದ್ದು, ಕಾಲೇಜು ತರಗತಿಗಳಿಗೆ ಭಾರೀ ಅಡಚಣೆಯಾಗುತ್ತಿದೆ ಅನ್ನೋದಾಗಿ ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಆರೋಪಿಸಿದರು. ಅಲ್ಲದೇ ವಿಪರೀತ ವಾಯು ಹಾಗೂ ಶಬ್ದ ಮಾಲಿನ್ಯದಿಂದ ಆರೋಗ್ಯದ ಮೇಲೂ ಕೆಟ್ಟ ಪರಿಣಾಮ ಬೀರುತ್ತಿರುವುದಾಗಿ ವಿದ್ಯಾರ್ಥಿಗಳು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ವಿದ್ಯಾರ್ಥಿಗಳ ಪ್ರತಿಭಟನೆಗೆ ಕಾಲೇಜು ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳೂ ಹಾಜರಿದ್ದು ಬೆಂಬಲಿಸಿದರು.
“ಕೃಷಿ ಭೂಮಿ ಹೆಸರಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ. ಈ ಕುರಿತು ನಾವು ಈ ಹಿಂದೆಯೇ ಜಿಲ್ಲಾಧಿಕಾರಿ ಸಹಿತ ಹಲವು ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಆದರೆ, ಇದುವರೆಗೂ ಯಾರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಇದರಿಂದಾಗಿ ಸಂಸ್ಥೆಯಲ್ಲಿ ಕಲಿಯುತ್ತಿರುವ ನೂರಾರು ಮಕ್ಕಳಿಗೆ ಅನ್ಯಾಯವಾಗುತ್ತಿದೆ” ಎಂದು BIT ಪಾಲಿಟೆಕ್ನಿಕ್ ಪ್ರಾಂಶುಪಾಲ ಡಾ. ಅಝೀಝ್ ಮುಸ್ತಫಾ ತಿಳಿಸಿದ್ದಾರೆ.
ಕೋರೆ ಮಾಲಿಕರು, ಕಾರ್ಮಿಕರ ಜಮಾವಣೆ:
ವಿದ್ಯಾರ್ಥಿಗಳು ಕಲ್ಲು ಗಣಿಗಾರಿಕೆ ವಿರುದ್ಧ ಪ್ರತಿಭಟನೆ ನಡೆಸುವ ಸುದ್ದಿ ಗೊತ್ತಾಗುತ್ತಿದ್ದಂತೆ ಸ್ಥಳೀಯ ಕಲ್ಲು ಗಣಿಗಾರಿಕೆ ನಡೆಸುತ್ತಿರುವ ಮಾಲಕರು ತಮ್ಮ ಕಾರ್ಮಿಕರು ಜೊತೆಗೂಡಿ, ಕಾಲೇಜು ಮುಂಭಾಗದ ರಸ್ತೆಯಲ್ಲಿ ಜಮಾವಣೆಗೊಂಡು ರಸ್ತೆಯಲ್ಲಿ ಕೂತು ಘೋಷಣೆ ಕೂಗುತ್ತಾ ಕೆಲಕಾಲ ಉದ್ವಿಗ್ನ ಸ್ಥಿತಿ ನಿರ್ಮಾಣಕ್ಕೂ ಕಾರಣರಾದರು. ಈ ವೇಳೆ ಸ್ಥಳದಲ್ಲಿದ್ದ ಪೊಲೀಸರು ಕಲ್ಲು ಕೋರೆಯ ಮಾಲಿಕರನ್ನು ಸಮಾಧಾನಪಡಿಸಿದರು.