ಬೆಂಗಳೂರು: ವಿಜಯಪುರ ಜಿಲ್ಲೆ ತಾಳಿಕೋಟೆಯ ತಹಶೀಲ್ದಾರ್ ಅಶೋಕ್ ಶರ್ಮಾ ಅವರ ಪುತ್ರಿಯನ್ನು ಪ್ರಿಯಕರನೇ ಬೆಂಕಿ ಹಚ್ಚಿ ಕೊಲೆ ಮಾಡಿರುವ ದಾರುಣ ಘಟನೆ ಎಲೆಕ್ಟ್ರಾನಿಕ್ ಸಿಟಿಯಲ್ಲಿ ನಡೆದಿದೆ.
ಪ್ರಿಯಕರ ಹಚ್ಚಿದ್ದ ಬೆಂಕಿಯಿಂದ ಗಂಭೀರ ಗಾಯಗೊಂಡಿದ್ದ ದಾನೇಶ್ವರಿಯು ಚಿಕಿತ್ಸೆ ಫಲಕಾರಿಯಾಗದೇ ಇಂದು ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾಳೆ.
ಪ್ರಿಯಕರ ಶಿವಕುಮಾರ್ ವಿಜಯಪುರದ ತಾಳೀಕೋಟೆಯ ತಹಶೀಲ್ದಾರ್ ಆಶೋಕ್ ಶರ್ಮ ಅವರ ಪುತ್ರಿ ದಾನೇಶ್ವರಿ ಹಾಗೂ ಶಿವಕುಮಾರ್ 2018ರಿಂದಲೂ ಪರಸ್ಪರ ಪ್ರೀತಿಸುತ್ತಿದ್ದರು.
ವಿಜಯಪುರದ ಬಿಎಲ್ ಡಿ ಕಾಲೇಜಿನಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡುವಾಗ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ವಿದ್ಯಾಭ್ಯಾಸದ ಬಳಿಕ ಶಿವಕುಮಾರ್, ಎಲೆಕ್ಟ್ರಾನಿಕ್ ಸಿಟಿ ಸಮೀಪದ ವೀರಸಂದ್ರದ ಸ್ಟೇನ್ ಲೇ ಕಂಪನಿಯಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ.
ಇತ್ತೀಚೆಗೆ ದಾನೇಶ್ವರಿಯನ್ನು ಶಿವಕುಮಾರ್ ಕಡೆಗಣಿಸುತ್ತಿದ್ದ ಎನ್ನಲಾಗಿದೆ. ಅಲ್ಲದೆ, ಮದುವೆ ವಿಚಾರವಾಗಿಯೂ ಇಬ್ಬರ ನಡುವೆ ಗಲಾಟೆಯಾಗಿತ್ತು ಎಂದು ಹೇಳಲಾಗಿದೆ.
ಹಲವು ಬಾರಿ ಮೊಬೈಲ್ ಕರೆ ಮಾಡಿದರೂ ಸ್ವೀಕರಿಸದ ಹಿನ್ನೆಲೆಯಲ್ಲಿ ಇತ್ತೀಚೆಗೆ ಶಿವಕುಮಾರ್ ಕೆಲಸ ಮಾಡುತ್ತಿದ್ದ ಸ್ಥಳಕ್ಕೆ ದಾನೇಶ್ವರಿ ಬಂದಿದ್ದಳು. ಈ ವೇಳೆ ಮದುವೆಯ ವಿಚಾರದಲ್ಲಿ ಕಂಪನಿಯ ಉದ್ಯೋಗಿಗಳ ಮುಂದೆಯೇ ಇಬ್ಬರ ನಡುವೆ ಜಗಳವಾಗಿತ್ತು.
ಇದರಿಂದ ಆಕ್ರೋಶಗೊಂಡ ಬಾಟಲ್ ನಲ್ಲಿ ಪೆಟ್ರೋಲ್ ತಂದು ದಾನೇಶ್ವರಿ ಮೇಲೆ ಎರಚಿ, ಶಿವಕುಮಾರ್ ಬೆಂಕಿ ಹಚ್ಚಿದ್ದಾನೆ ಎಂದು ಆರೋಪಿಸಲಾಗಿದೆ. ಬೆಂಕಿ ಹಚ್ಚಿದ್ದರಿಂದ ಗಾಯಗೊಂಡ ದಾನೇಶ್ವರಿಯನ್ನು ತಾನೇ ಖಾಸಗಿ ಆಸ್ಪತ್ರೆಗೆ ದಾಖಲಿದ್ದ. ಆದರೆ, ಚಿಕಿತ್ಸೆ ಫಲಕಾರಿಯಾಗದೇ ದಾನೇಶ್ವರಿ ಮೃತಪಟ್ಟಿದ್ದಾಳೆ.
ಈ ಸಂಬಂಧ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಐಪಿಸಿ ಸೆಕ್ಷನ್ 307 ಮತ್ತು ಎಸ್ಸಿ-ಎಸ್ಟಿ ಕಾಯಿದೆ ಅಡಿ ಪ್ರಕರಣ ದಾಖಲಿಸಲಾಗಿದೆ. ಎರಡು ದಿನದ ಹಿಂದೆ ಈ ಹೀನ ಕೃತ್ಯ ನಡೆದಿದ್ದು, ಇಂದು ಚಿಕಿತ್ಸೆ ಫಲಕಾರಿಯಾಗದೇ ದಾನೇಶ್ವರಿ ಕೊನೆಯುಸಿರೆಳೆದಿದ್ದಾಳೆ.
ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಳ್ಳಲಾಗಿದೆ.
ಈ ನಡುವೆ ನಮ್ಮ ಪುತ್ರಿಯನ್ನು ಶಿವಕುಮಾರ್ ಪೆಟ್ರೋಲ್ ಸುರಿದು ಹತ್ಯೆಗೈದಿದ್ದಾನೆ. ಆತನನ್ನು ಬಂಧಿಸಿ, ಕಾನೂನು ಕ್ರಮ ಕೈಗೊಳ್ಳುವಂತೆ ತಾಳಿಕೋಟೆ ತಹಶೀಲ್ದಾರ್ ಅಶೋಕ್ ಶರ್ಮ ಒತ್ತಾಯಿಸಿದ್ದಾರೆ.