ಉತ್ತರ ಪ್ರದೇಶ: ವಿವಾದಾತ್ಮಕ ಬಾಲಿವುಡ್ ಚಿತ್ರ ದಿ ಕಾಶ್ಮೀರ್ ಫೈಲ್ಸ್ ವಿರುದ್ಧ ಆಕ್ರೋಶಗಳು ದೇಶಾದ್ಯಂತ ಹೆಚ್ಚಾಗುತ್ತಲೇ ಇದೆ. ಸುಳ್ಳಿನ ಕಡತಗಳನ್ನೇ ಸೃಷ್ಟಿಸಿ ಈ ಚಿತ್ರವನ್ನು ಮಾಡಲಾಗಿದೆ ಎಂದು ಸಿನೆಮಾ ವೀಕ್ಷಕರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೇ ನಿರ್ದಿಷ್ಟ ಸಮುದಾಯದವನ್ನು ಅವಹೇಳನ ಮಾಡುವ ರೀತಿಯಲ್ಲಿ ಚಿತ್ರವನ್ನು ಚಿತ್ರೀಕರಿಸಲಾಗಿದೆ ಎಂಬ ಆರೋಪವು ದಿ ಕಾಶ್ಮೀರ್ ಫೈಲ್ಸ್ ಚಿತ್ರದ ವಿರುದ್ಧ ಕೇಳಿ ಬಂದಿದೆ.
ಚಿತ್ರದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಕಾಶ್ಮೀರಕ್ಕೆ ಸಂಬಂಧಪಟ್ಟಂತೆ ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಮಾಡಲು ಸಾಧ್ಯವೆಂದಾದರೆ, ಉತ್ತರ ಪ್ರದೇಶದ ಲಖಿಂಪುರ ಖೇರಿ ಹಿಂಸಾಚಾರಕ್ಕೆ ಸಂಬಂಧಪಟ್ಟಂತೆ ದಿ ಲಖಿಂಪುರ ಫೈಲ್ಸ್ ಎಂಬ ಚಲನಚಿತ್ರವನ್ನೂ ಯಾಕೆ ಮಾಡಬಾರದು ಎಂದು ಖಾರವಾಗಿಯೇ ಪ್ರಶ್ನಿಸಿದ್ದಾರೆ.
ಸೀತಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಶ್ಮೀರಿ ಪಂಡಿತರ ಹತ್ಯಾಕಾಂಡದ ಕಥೆಯನ್ನು ತೋರಿಸಲು ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಮಾಡಿದ್ದಾರೆ. ಹಾಗೇ, ಲಖಿಂಪುರ ಖೇರಿಯಲ್ಲಿ ರೈತರ ಮೇಲೆ ಬಿಜೆಪಿ ಸಚಿವನ ಪುತ್ರ ಜೀಪು ಹತ್ತಿಸಿ, ರೈತರನ್ನು ಕೊಲೆಮಾಡಿದ್ದ. ಈ ವಿಚಾರಕ್ಕೆ ಸಂಬಂಧಪಟ್ಟಂತೆಯೂ ಒಂದು ಸಿನಿಮಾವನ್ನು ಯಾಕೆ ಮಾಡಬಾರದು ಎಂದು ಪ್ರಶ್ನಿಸಿದ್ದಾರೆ.
ಅಕ್ಟೋಬರ್ 3ರಂದು ಲಖಿಂಪುರದಲ್ಲಿ ಶಾಂತವಾಗಿ ಪ್ರತಿಭಟಿಸುತ್ತಿದ್ದ ರೈತರ ಮೇಲೆ ಕೇಂದ್ರ ಸಚಿವ ಅಜಯ್ ಮಿಶ್ರಾ ಪುತ್ರ ಆಶೀಶ್ ಮಿಶ್ರಾ ಜೀಪನ್ನು ಹರಿಸಿ ಗುಂಡಿನ ದಾಳಿಯನ್ನು ನಡೆಸಿದ್ದ. ಘಟನೆಯಲ್ಲಿ ನಾಲ್ವರು ರೈತರು ದಾರುಣವಾಗಿ ಮೃತಪಟ್ಟಿದ್ದರು.