ನವದೆಹಲಿ: ಲೋಕ ಸಭೆಯಲ್ಲಿ ಬಜೆಟ್ ಚರ್ಚೆಯ ಎರಡನೆಯ ಮಜಲಿನ ವೇಳೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಯವರು ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಜಾಲ ತಾಣಗಳನ್ನು ದುರುಪಯಯೋಗಿಸಿಕೊಳ್ಳುವುದರ ಬಗ್ಗೆ ತಮ್ಮ ಆತಂಕ ವ್ಯಕ್ತಪಡಿಸಿದರು.
ಜಾಗತಿಕ ಜಾಲ ತಾಣ ಕಂಪೆನಿಗಳು ಎಲ್ಲ ಪಕ್ಷಗಳಿಗೂ ನ್ಯಾಯ ಸಲ್ಲಿಸುತ್ತಿಲ್ಲ. ಕೆಲವರ ಚಮಚಾಗಿರಿ ಮಾಡುತ್ತಿರುವಂತಿದೆ. ಆಳುವವರನ್ನು ಟೀಕಿಸುವುದು ಈ ಕಂಪೆನಿಗಳಿಗೆ ಹಿಡಿಸುವುದಿಲ್ಲ. ಆದರೆ ಆಳುವ ಪಕ್ಷದವರ ಮಸ್ಕಾ ಸುದ್ದಿಗಳಿಗೆ ಸಾಕಷ್ಟು ಪ್ರಚಾರ ಸಿಗುತ್ತದೆ. ಫೇಸ್ ಬುಕ್ ಕಂಪೆನಿಯಂತೂ ಎಲ್ಲ ನಿಯಮಾವಳಿಗಳನ್ನು ಮುರಿದು ದ್ವೇಷ ತ್ವೇಷದ ಸುದ್ದಿಗಳನ್ನು ಕೆಲವರಿಗೆ ಅನುಕೂಲವಾಗುವಂತೆ ಹರಿಯ ಬಿಡುತ್ತದೆ ಎಂದು ಸೋನಿಯಾ ಗಾಂಧಿ ಲೋಕಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಸುಳ್ಳು ಸುದ್ದಿಗಳಿಗೆ, ಯುವಕರ ಮನಸ್ಸನ್ನು ಕೆಡಿಸುವಂಥ ಸುದ್ದಿಗಳಿಗೆ, ನಕಲಿ ಜಾಹೀರಾತುಗಳಿಗೆ, ಒಮ್ಮುಖವಾದ ರೇಜಿಗೆ ಸುದ್ದಿಗಳಿಗೆ ಫೇಸ್ ಬುಕ್ ಬೇಕೆಂದೇ ಅವಕಾಶ ನೀಡುತ್ತಿದೆ ಎಂದು ಅವರು ಹೇಳಿದರು.
ಸುಳ್ಳು ಸುದ್ದಿ ದಾರಿಯಿಂದ ಹಣ ಮಾಡುವುದನ್ನು ಫೇಸ್ ಬುಕ್ ಮುಂದುವರಿಸುತ್ತದೆಯೇ? ಫೇಸ್ ಬುಕ್ ಸಹಿತ ಎಲ್ಲ ಅಡ್ಡ ಹಾದಿ ಹಿಡಿದಿರುವ ಜಾಲ ತಾಣ ದೈತ್ಯರಿಗೆ ಸರಕಾರ ಕಡಿವಾಣ ಹಾಕಬೇಕು. ಇಲ್ಲದಿದ್ದರೆ ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವವು ಇವರ ವಿದ್ಯುನ್ಮಾನ ರಾಜಕೀಯಕ್ಕೆ ಬಲಿಯಾದೀತು ಎಂದು ಸೋನಿಯಾ ಗಾಂಧಿ ಎಚ್ಚರಿಸಿದರು.
ಕಾಂಗ್ರೆಸ್ ಹೇಗೆ ಮಾಧ್ಯಮ ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕಿತ್ತು ಎಂಬುದು ಗೊತ್ತಿದೆ ಎಂದು ಬಿಜೆಪಿ ಸಂಸದ ನಿಶಿಕಾಂತ್ ದುಬೆ ಈ ಸಂದರ್ಭದಲ್ಲಿ ಹೇಳಿದರು.