ಮಂಗಳೂರು: ಹಿಜಾಬ್ ಕುರಿತು ಕರ್ನಾಟಕ ಹೈಕೋರ್ಟ್ ನೀಡಿರುವ ತೀರ್ಪು ನ್ಯಾಯಬದ್ಧವಾಗಿಲ್ಲ. ಇದರ ವಿರುದ್ಧ ಸಮುದಾಯ ಒಗ್ಗಟ್ಟಿನಿಂದ ಹೋರಾಟ ನಡೆಸಬೇಕು ಎಂದು ಮಾಜಿ ಮೇಯರ್ ಹಾಗೂ ದ.ಕ. ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷ ಕೆ. ಅಶ್ರಫ್ ಪ್ರತಿಕ್ರಿಯಿಸಿದ್ದಾರೆ.
“ಪ್ರಸ್ತುತ” ನ್ಯೂಸ್ ನೊಂದಿಗೆ ಮಾತನಾಡಿದ ಅವರು, ಹಿಜಾಬ್ ಕುರಿತು ಹೈಕೋರ್ಟ್ ನೀಡಿರುವ ತೀರ್ಪು ಒಪ್ಪುವಂತಹದ್ದಲ್ಲ. ದೇಶದಲ್ಲಿ ಇತ್ತೀಚೆಗೆ ಬಾಬರಿ ಮಸೀದಿ ತೀರ್ಪಿನ ಬಳಿಕ ನ್ಯಾಯಾಲಯದ ತೀರ್ಪುಗಳು ವ್ಯತಿರಿಕ್ತವಾಗಿ ಬರುತ್ತಿವೆ. ಹಿಜಾಬ್ ಇಸ್ಲಾಮಿನ ಅತ್ಯಗತ್ಯ ಅಂಗವಲ್ಲ ಎಂದು ನ್ಯಾಯಾಲಯ ಹೇಳಿರುವುದು ಸರಿಯಲ್ಲ ಎಂದು ಹೇಳಿದರು.
ಕಾನೂನು ಸುವ್ಯವಸ್ಥೆ ಕಾಪಾಡುವುದು ನಮ್ಮ ಕರ್ತವ್ಯ. ಈ ನಿಟ್ಟಿನಲ್ಲಿ ಎಲ್ಲರೂ ಸಹಕರಿಸಬೇಕು. ಹೈಕೋರ್ಟ್ ತೀರ್ಪಿನ ವಿರುದ್ಧ ಸುಪ್ರೀಂಕೋರ್ಟ್ ನಲ್ಲಿ ಪ್ರಶ್ನಿಸುವುದರ ಬಗ್ಗೆ ಸಮುದಾಯದ ಹಿರಿಯರು, ನಾಯಕರು ತೀರ್ಮಾನಿಸಬೇಕು ಎಂದು ಅಶ್ರಫ್ ಹೇಳಿದರು.
ಇಂತಹ ಸಂದರ್ಭದಲ್ಲಿ ಧಾರ್ಮಿಕ ಮುಖಂಡರು, ಖಾಝಿಗಳು ಮಾತನಾಡಬೇಕು. ನಮ್ಮ ಧರ್ಮಗುರುಗಳು ಇದನ್ನು ಗಂಭೀರವಾಗಿ ಪರಿಗಣಿಸಬೇಕು. ತಕ್ಷಣ ಖಾಝಿಗಳು ಹೇಳಿಕೆ ನೀಡಿ ಮುಂದೆ ನಾವು ಏನು ಮಾಡಬೇಕು ಎಂಬುದರ ಬಗ್ಗೆ ಮಾರ್ಗದರ್ಶನ ನೀಡಬೇಕು ಎಂದು ಹೇಳಿದರು.
ಕೆಲವು ಮೌಲಾನಾಗಳು ಹಿಜಾಬ್ ಮುಖ್ಯವಲ್ಲ, ಶಿಕ್ಷಣ ಮುಖ್ಯ ಎಂದು ಅನಗತ್ಯ ಹೇಳಿಕೆ ನೀಡಿದ್ದಾರೆ. ಇಂತಹ ಭಿನ್ನ ಹೇಳಿಕೆಗಳು ಸಮುದಾಯದಲ್ಲಿ ಒಡಕುಂಟು ಮಾಡುತ್ತವೆ. ಇದು ಸರಿಯಲ್ಲ. ಬೇರೆ ಬೇರೆ ಹೇಳಿಕೆ ನೀಡಬಾರದು, ಎಲ್ಲರೂ ಒಗ್ಗಟ್ಟಿನಿಂದ ಇರಬೇಕು ಎಂದು ಹೇಳಿದರು