ವಾಷಿಂಗ್ಟನ್ : ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಭದ್ರಕೋಟೆಯಾಗಿದ್ದ ಜಾರ್ಜಿಯಾದಲ್ಲೂ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬೈಡನ್ ಗೆಲುವು ಖಚಿತವಾಗಿದೆ. ಮರು ಎಣಿಕೆಯಲ್ಲೂ ಜಾರ್ಜಿಯಾದಲ್ಲಿ ಬೈಡನ್ ಗೆಲುವು ಸ್ಪಷ್ಟವಾಗಿದೆ.
50 ಲಕ್ಷ ಮತಗಳ ಮರು ಎಣಿಕೆ ಬಳಿಕ ಬೈಡನ್ ಅವರು ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರನ್ನು 12,284 ಮತಗಳ ಅಂತರದಿಂದ ಸೋಲಿಸಿದ್ದಾರೆ. ಇದಕ್ಕೂ ಮೊದಲು ಜಾರ್ಜಿಯಾದಲ್ಲಿ ಬೈಡನ್ 14,000 ಮತಗಳ ಅಂತರ ಮುನ್ನಡೆ ಸಾಧಿಸಿದ್ದಾರೆ ಎಂದು ಅನಧಿಕೃತ ವರದಿಗಳು ತಿಳಿಸಿದ್ದವು.
ಇಪ್ಪತ್ತೆಂಟು ವರ್ಷಗಳ ಬಳಿಕ, ಅಂದರೆ ಕ್ಲಿಂಟನ್ ಬಳಿಕ ಇದೇ ಮೊದಲ ಬಾರಿ ಡೆಮಾಕ್ರಟರು ಜಾರ್ಜಿಯಾದಲ್ಲಿ ರಿಪಬ್ಲಿಕನ್ನರನ್ನು ಹಿಂದಿಕ್ಕಿ ವಿಜಯ ಗಳಿಸಿದ್ದಾರೆ. 1992ರಲ್ಲಿ ಆಗಿನ ಅಭ್ಯರ್ಥಿ ಬಿಲ್ ಕ್ಲಿಂಟನ್ ಗೆಲುವು ಸಾಧಿಸಿದ ಬಳಿಕ, ಇಲ್ಲಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಗಳು ಗೆದ್ದಿರಲಿಲ್ಲ.