ವಾಷಿಂಗ್ಟನ್: ಉಕ್ರೇನ್ ಮೇಲೆ ಹಿಡಿತ ಬಿಗಿಗೊಳಿಸುತ್ತಿರುವ ರಷ್ಯಾ ಈಗ ಚೀನಾದಿಂದ ಹಾಗೂ ಹಣಕಾಸು ನೆರವು ಕೋರಿದ್ದು, ಯಾವುದೇ ಕಾರಣಕ್ಕೂ ರಷ್ಯಾಗೆ ನೆರವು ನೀಡಬಾರದು ಎಂದು ಚೀನಾಕ್ಕೆ ಅಮೆರಿಕ ಎಚ್ಚರಿಕೆ ನೀಡಿದೆ.
ಕಳೆದ 20 ದಿನಗಳಿಂದ ಉಕ್ರೇನ್ನಲ್ಲಿ ನಿರಂತರವಾಗಿ ರಾಕೆಟ್, ಕ್ಷಿಪಣಿ ಹಾಗೂ ಶೆಲ್ಗಳಿಂದ ದಾಳಿ ಮಾಡುತ್ತಿರುವ ರಷ್ಯಾಗೆ ಶಸ್ತ್ರಾಸ್ತ್ರಗಳ ಕೊರತೆ ಉಂಟಾಗಿದ್ದು, ದೇಶದ ಬಹುತೇಕ ಸೈನಿಕರನ್ನು ಯುದ್ಧಭೂಮಿಗೆ ಕಳುಹಿಸಿರುವುದು ಹಾಗೂ ಹಲವು ದೇಶಗಳು ನಿರ್ಬಂಧ ಹೇರಿರುವುದರಿಂದ ಹಣಕಾಸು ಬಿಕ್ಕಟ್ಟು ಸಹ ಎದುರಾಗಿದೆ. ಆದರೆ, ಶತಪ್ರಯತ್ನದೊಂದಿಗೆ ಉಕ್ರೇನ್ನಲ್ಲಿ ದಾಳಿ ಮುಂದುವರಿಸುವ ಉದ್ದೇಶವಿರುವ ರಷ್ಯಾ ಚೀನಾದ ನೆರವು ಕೋರಿದೆ.
”ಉಕ್ರೇನ್ನಲ್ಲಿ ದಾಳಿ ಮುಂದುವರಿಸಲು ಡ್ರೋನ್ಗಳು ಸೇರಿ ಹಲವು ಯುದ್ಧ ಸಲಕರಣೆಗಳು ಹಾಗೂ ಹಣಕಾಸು ನೆರವು ನೀಡಬೇಕು” ಎಂದು ರಷ್ಯಾವು ಚೀನಾದ ನೆರವು ಕೋರಿದೆ ಎಂದು ಅಮೆರಿಕದ ಅಧಿಕಾರಿಗಳು ತಿಳಿಸಿದ್ದಾರೆ.
ದಾಳಿ ಆರಂಭಿಸಿದಾಗಿನಿಂದಲೂ ರಷ್ಯಾಗೆ ಚೀನಾ ಬೆಂಬಲ ಸೂಚಿಸಿದ್ದು, ಅದರಲ್ಲೂ, ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಭೆಯಲ್ಲಿ ರಷ್ಯಾ ವಿರುದ್ಧ ಹಲವು ರಾಷ್ಟ್ರಗಳು ಮಂಡಿಸಿದ ನಿರ್ಣಯದ ಮೇಲೆ ಮತದಾನ ಮಾಡುವುದರಿಂದಲೂ ದೂರ ಉಳಿಯುವ ಮೂಲಕ ಪುಟಿನ್ಗೆ ಬೆಂಬಲ ನೀಡಿತ್ತು. ಇದೇ ವಿಶ್ವಾಸದಿಂದ ವ್ಲಾಡಿಮಿನ್ ಪುಟಿನ್ ಅವರು ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ಗೆ ನೆರವು ಕೋರಿದ್ದಾರೆ ಎಂದು ತಿಳಿದುಬಂದಿದೆ.