ಮಂಗಳೂರು: ನಾಳೆ ಹೈಕೋರ್ಟ್ ನಲ್ಲಿ ಹಿಜಾಬ್ ಕುರಿತಾದ ತೀರ್ಪು ಹೊರ ಬರಲಿರುವ ಕಾರಣ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಮುಂಜಾಗ್ರತಾ ಕ್ರಮವಾಗಿ ಅಂಗನವಾಡಿ ಸಹಿತ ಜಿಲ್ಲೆಯ ಎಲ್ಲ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಡಾ.ಕೆವಿ ರಾಜೇಂದ್ರ ಆದೇಶಿಸಿದ್ದಾರೆ.
ಜೊತೆಗೆ ಜಿಲ್ಲೆಯಾದ್ಯಂತ ಸೆಕ್ಷನ್ 144ರ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಶಾಲಾ ಕಾಲೇಜುಗಳಲ್ಲಿ ನಡೆಯುತ್ತಿದ್ದ ಆಂತರಿಕ ಪರೀಕ್ಷೆಗಳನ್ನು ಕಡ್ಡಾಯವಾಗಿ ಮುಂದೂಡಲಾಗಿದೆ.
ಹಿಜಾಬ್ ತೀರ್ಪು ನಾಳೆಯಿಂದ 1ವಾರ ಬೆಂಗಳೂರಿನಲ್ಲಿ ನಿಷೇದಾಜ್ಞೆ ಜಾರಿ
ಬೆಂಗಳೂರು,ಮಾ.14- ದೇಶದ್ಯಾಂತ ಭಾರೀ ಕೋಲಾಹಲ ಸೃಷ್ಟಿಸಿದ್ದ ಹಿಜಾಬ್ ಪ್ರಕರಣದ ಸಂಬಂಧ ನಾಳೆ ಬೆಳಿಗ್ಗೆ ಹೈಕೋರ್ಟ್ ಅಂತಿಮ ತೀರ್ಪು ಪ್ರಕಟಿಸಿರುವ ಹಿನ್ನೆಲೆಯಲ್ಲಿ ನಗರದಾದ್ಯಂತ ಬಿಗಿ ಪೊಲೀ್ ಬಂದೋಬಸ್ಥ್ ವ್ಯವಸ್ಥೆ ಮಾಡಲಾಗಿದೆ.
ಹಿಜಾಬ್ ತೀರ್ಪು ಹಿನ್ನೆಲೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಗರದಲ್ಲಿ ನಡೆಯದಂತೆ ಅಭೂತಪೂರ್ವ ಪೊಲೀಸ್ ಭದ್ರತೆಯನ್ನು ಕೈಗೊಂಡು ಒಂದು ವಾರ ಕಾಲ 144 ಸೆಕ್ಷನ್ ಅನ್ವಯ ನಿಷೇದಾಜ್ಞೆ ಜಾರಿಗೊಳಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದ್ದಾರೆ.
ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಹಿಜಾಬ್ ಗೆ ಸಂಬಂಧಿಸಿದಂತೆ ಮುಂಜಾಗ್ರತ ಕ್ರಮಗಳನ್ನ ತೆಗೆದುಗೊಳ್ಳಲಾಗಿದೆ. ನಗರದಲ್ಲಿ ನಾಳೆಯಿಂದ 10 ಸಾವಿರಕ್ಕೂ ಹೆಚ್ಚು ಪೊಲೀಸರನ್ನ ನಿಯೋಜನೆ ಮಾಡಲಾಗುವುದು. ಯಾವುದೇ ಪ್ರತಿಭಟನೆ, ಮೆರವಣಿಗೆಗೆ ಅವಕಾಶವಿರುವುದಿಲ್ಲ ಎಂದಿದ್ದಾರೆ.
ಹೆಚ್ಚುವರಿಯಾಗಿ ಕೆಎಸ್ಆರ್ಪಿ ತುಕಡಿ, ಸಿಎಆರ್ ತುಕಡಿ ನಿಯೋಜನೆ ಮಾಡಲಾಗಿದೆ. ಸೂಕ್ಷ್ಮ ಪ್ರದೇಶಗಳನ್ನ ಗುರುತಿಸಿ ಬೆಂಗಳೂರು ಜನತೆ ಇಲ್ಲಿವರೆಗೂ ನಮಗೆ ಸಹಕಾರ ನೀಡಿದ್ದೀರಿ, ಮುಂದಿನ ದಿನಗಳಲ್ಲೂ ನೀಡಿ ಎಂದು ಮನವಿ ಮಾಡಿದ್ದಾರೆ.
ಈನಡುವೆ ರಾಜ್ಯದ ಸೂಕ್ಷ್ಮ ಅತಿಸೂಕ್ಷ್ಮ ಜಿಲ್ಲೆ ತಾಲೂಕುಗಳಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಗರದಲ್ಲಿ ನಡೆಯದಂತೆ ಅಭೂತಪೂರ್ವ ಪೊಲೀಸ್ ಭದ್ರತೆಯನ್ನು ಕೈಗೊಂಡು ಒಂದು ವಾರ ಕಾಲ 144 ಸೆಕ್ಷನ್ ಅನ್ವಯ ನಿಷೇದಾಜ್ಞೆ ಜಾರಿಗೊಳಿಸಲಾಗಿದೆ ಎಂದರು.
ಹೈಕೋರ್ಟ್ ತೀರ್ಪಿನತ್ತ ಚಿತ್ತ:
ನಾಳೆ ಹೈಕೋರ್ಟ್ ತೀರ್ಪು ಪ್ರಕಟಿಸಲಿದ್ದು, ಸಾಕಷ್ಟು ಕುತೂಹಲ ಕೆರಳಿಸಿದೆ. ಪ್ರಕರಣ ಕೇವಲ ಧಾರ್ಮಿಕ ಸೂಕ್ಷ್ಮ ಸಂಗತಿಯನ್ನಷ್ಟೇ ಒಳಗೊಂಡಿದೆಯಲ್ಲದೇ, ರಾಜಕೀಯವಾಗಿಯೂ ತಳುಕು ಹಾಕಿಕೊಂಡಿರುವುದರಿಂದ ಹೈಕೋರ್ಟ್ ಯಾವುದೇ ತೀರ್ಪು ನೀಡಿದರೂ ಅರ್ಜಿದಾರ ವಿದ್ಯಾರ್ಥಿನಿಯರು ಅಥವಾ ಸರ್ಕಾರ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸುವ ಎಲ್ಲ ಸಾಧ್ಯತೆಯೂ ಇದೆ.