ಬೆಂಗಳೂರು: ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಚರ್ಚೆಯಾಗುತ್ತಿರುವ ಹಿಜಾಬ್, ಕೇಸರಿ ಸಂಘರ್ಷ ಹೈಕೋರ್ಟ್ ಮೆಟ್ಟಿಲು ಏರಿದ್ದು ನಾಳೆ ತೀರ್ಪು ಪ್ರಕಟಗೊಳ್ಳಲಿದೆ.
ಸಮವಸ್ತ್ರ ಸಂಹಿತೆ ಜಾರಿಗೊಳಿಸುವ ಮೂಲಕ ಹಿಜಾಬ್ ನಿರ್ಬಂಧಿಸಿರುವ ಕಾಲೇಜು ಅಭಿವೃದ್ಧಿ ಸಮಿತಿಗಳ (ಸಿಡಿಸಿ) ಕ್ರಮ ಹಾಗೂ ಸಮವಸ್ತ್ರ ಸಂಹಿತೆ ಜಾರಿಗೊಳಿಸಲು ಶಿಕ್ಷಣ ಸಂಸ್ಥೆಗಳಿಗೆ ಸೂಚನೆ ನೀಡಿ ಸರ್ಕಾರ ಹೊರಡಿಸಿರುವ ಆದೇಶವನ್ನು ಪ್ರಶ್ನಿಸಿ ಮುಸ್ಲಿಂ ವಿದ್ಯಾರ್ಥಿನಿಯರು ಹಾಗೂ ಅವರ ಪೋಷಕರು ಹೈಕೋರ್ಟ್ ಗೆ ರಿಟ್ ಅರ್ಜಿಗಳನ್ನು ಸಲ್ಲಿಸಿದ್ದರು.
ವಸ್ತ್ರಸಂಹಿತೆ ಮೂಲಕ ಹಿಜಾಬ್ ನಿರ್ಬಂಧಿಸಿರುವ ಶಿಕ್ಷಣ ಸಂಸ್ಥೆಗಳ ಕ್ರಮ ಹಾಗೂ ಸರ್ಕಾರದ ಆದೇಶ ನಿಯಮಬಾಹಿರ. ಸಂವಿಧಾನದ 25ನೇ ವಿಧಿಯ ಅನುಸಾರ ನೀಡಲಾಗಿರುವ ಧಾರ್ಮಿಕ ಹಕ್ಕು ಹಾಗೂ ವಿಧಿ 19(1)ರಲ್ಲಿ ನೀಡಿರುವ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು ಸರ್ಕಾರ ಈ ಮೂಲಕ ನಿರ್ಬಂಧಿಸಿದೆ ಎಂದು ಆಕ್ಷೇಪಿಸಿದ್ದರು.