ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಚೊಚ್ಚಲ ‘ಪಿಂಕ್ ಬಾಲ್’ ಟೆಸ್ಟ್ ಪಂದ್ಯವನ್ನು ಟೀಮ್ ಇಂಡಿಯಾ 238 ರನ್’ಗಳಿಂದ ಗೆದ್ದು ಬೀಗಿದೆ. ಮೂರನೇ ದಿನದಾಟದಲ್ಲಿ ಶ್ರೀಲಂಕಾ ಗೆಲುವಿಗೆ 419 ರನ್’ಗಳ ಅಗತ್ಯವಿತ್ತು. ಆದರೆ 208 ರನ್’ಗಳಿಸುವಷ್ಟರಲ್ಲೇ ಲಂಕಾ ಸರ್ವಪತನ ಕಂಡಿತು. ಆ ಮೂಲಕ ಬೆಂಗಳೂರು ಟೆಸ್ಟ್ ಮೂರನೇ ದಿನದಲ್ಲೇ ಕೊನೆಗೊಂಡಿದೆ.
ಶ್ರೀಲಂಕಾದ ಆರಂಭಿಕ ಆಟಗಾರ ಕರುಣರತ್ನೆ ಶತಕ [107] ಹಾಗೂ ಕುಸಾಲ್ ಮೆಂಡಿಸ್ ಅರ್ಧಶತಕ [ 54] ರನ್’ಗಳಿಸುವ ಮೂಲಕ, ಬೌಲಿಂಗ್ ಟ್ರ್ಯಾಕ್’ನಲ್ಲಿ ದಿಟ್ಟ ಬ್ಯಾಟಿಂಗ್ ಪ್ರದರ್ಶಿಸಿ ಪಂದ್ಯವನ್ನು ಉಳಿಸಿಕೊಳ್ಳಲು ಪ್ರಯತ್ನಿಸಿದರಾದರೂ, ಇವರಿಬ್ಬರ ನಿರ್ಗಮನದ ಬಳಿಕ ಬಂದ ಬ್ಯಾಟರ್’ಗಳು ಪೆವಿಲಿಯನ್ ಪರೇಡ್ ನಡೆಸಿದರು. ಕೀಪರ್ ಡಿಕ್’ವೆಲ್ಲಾ 12 ರನ್’ಗಳಿಸಿದ್ದು ಹೊರತುಪಡಿಸಿದರೆ ಉಳಿದ 7 ಮಂದಿ ಎರಡಂಕಿಯನ್ನು ದಾಟಲಿಲ್ಲ. ಭಾರತದ ಪರ ಆರ್.ಅಶ್ವಿನ್ 4 ವಿಕೆಟ್ ಪಡೆದರೆ, ಬುಮ್ರಾ 3 ವಿಕೆಟ್ ಪಡೆದರು.
ಸಂಕ್ಷಿಪ್ತ ಸ್ಕೋರ್
ಟೀಮ್ ಇಂಡಿಯಾ 252 & 303/9ಡಿಕ್ಲೇರ್
ಶ್ರೀಲಂಕಾ 109 & 208