►ದ.ಕ, ಉಡುಪಿ, ಉತ್ತರ ಕನ್ನಡ ಸೇರಿದಂತೆ 7 ಜಿಲ್ಲೆಗಳ ಮುಖಂಡರ ಸಭೆ
ಬೆಂಗಳೂರು: ರಾಜ್ಯದ ನೀರಾವರಿ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಜೆಡಿಎಸ್ ಪಕ್ಷ ಕೈಗೊಳ್ಳಲಿರುವ ‘ಜನತಾ ಜಲಧಾರೆ’ ಗಂಗಾ ರಥಯಾತ್ರೆಯ ಪೂರ್ವಸಿದ್ಧತೆ ನಿಮಿತ್ತ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು 7 ಜಿಲ್ಲೆಗಳ ಮುಖಂಡರ ಜತೆ ಮಾತುಕತೆ ನಡೆಸಿದರು.
ವಿಧಾನಸೌಧದ ಜೆಡಿಎಸ್ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ನಡೆದ ಈ ಸಭೆಯಲ್ಲಿ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ರಾಯಚೂರು, ವಿಜಯಪುರ, ಬಾಗಲಕೋಟೆ , ಕೊಪ್ಪಳ ಜಿಲ್ಲೆಗಳ ಮುಖಂಡರ ಜತೆ ಮಾತುಕತೆ ನಡೆಸಿದರು.
ರಾಜ್ಯದ ಹದಿನೈದು ಪವಿತ್ರ ತಾಣಗಳಲ್ಲಿ ಜಲ ಸಂಗ್ರಹಣೆ ಮಾಡುವ ಈ ಗಂಗಾ ರಥಯಾತ್ರೆಯ ರೂಪುರೇಷೆ, ರೀತಿ ರಿವಾಜು, ಯಾತ್ರೆ ಸಾಗುವ ಹಾದಿ, ಗಂಗಾಪೂಜೆ, ಮೆರವಣಿಗೆ ಇತ್ಯಾದಿ ಅಂಶಗಳ ಬಗ್ಗೆ ಮಾಜಿ ಮುಖ್ಯಮಂತ್ರಿಗಳು ಮುಖಂಡರ ಜತೆ ಚರ್ಚೆ ನಡೆಸಿದರು.
ಜಲಧಾರೆ ಕಾರ್ಯಕ್ರಮವನ್ನು ಪಕ್ಷವೂ ಅತ್ಯಂತ ಶ್ರದ್ಧೆಯಿಂದ ಹಮ್ಮಿಕೊಂಡಿದ್ದು, ಅದನ್ನು ಎಲ್ಲ ಮುಖಂಡರು, ಕಾರ್ಯಕರ್ತರು ಒಟ್ಟಾಗಿ ಯಶಸ್ವಿಗೊಳಿಸಬೇಕು ಎಂದು ಕುಮಾರಸ್ವಾಮಿ ಅವರು ಮುಖಂಡರಿಗೆ ಸೂಚನೆ ನೀಡಿದರು.
ಎಲ್ಲ ಜಿಲ್ಲೆಗಳ ಪೂರ್ವಭಾವಿ ಸಭೆ ಮುಗಿದ ನಂತರ ಜಲಧಾರೆ ಆರಂಭವಾಗುವ ದಿನಾಂಕವನ್ನು ಪ್ರಕಟ ಮಾಡುವುದಾಗಿ ಇದೇ ವೇಳೆ ಮಾಜಿ ಮುಖ್ಯಮಂತ್ರಿಗಳು ತಿಳಿಸಿದರು.
ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಕೆ.ಎನ್.ತಿಪ್ಪೇಸ್ವಾಮಿ, ಶಾಸಕ ದೇವಾನಂದ ಚವ್ಹಾಣ್, ಮುಖಂಡರಾದ ಬಿ.ಡಿ.ಪಾಟೀಲ್, ಸುನೀತಾ ಚವ್ಹಾಣ್, ಸಿದ್ದು ಬಂಡಿ, ಕರೆಮ್ಮ, ಗಣಪೇ ಗೌಡ, ಜಾಕಿ ಮಾಧವ, ಸುಮತಿ ಹೆಗ್ಗಡೆ, ಮುಹಮದ್ ಅಲ್ತಾಫ್, ದಿನಕರ್ ಉಳ್ಳಾಲ್, ಜಾಫರ್ ಸುಳ್ಯ ಮುಂತಾದವರು ಹಾಜರಿದ್ದರು.