ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಚೊಚ್ಚಲ ‘ಪಿಂಕ್ ಬಾಲ್’ ಟೆಸ್ಟ್ ಪಂದ್ಯದ ಎರಡನೇ ದಿನದಾಟದ ಅಂತ್ಯಕ್ಕೆ ಪ್ರವಾಸಿ ಶ್ರೀಲಂಕಾ ದ್ವಿತೀಯ ಇನ್ನಿಂಗ್ಸ್’ನಲ್ಲಿ 28 ರನ್’ಗಳಿಸುವಷ್ಟರಲ್ಲಿ ಮೊದಲ ವಿಕೆಟ್ ಕಳೆದುಕೊಂಡಿದ್ದು, ಗೆಲುವಿಗಾಗಿ ಇನ್ನೂ 419 ರನ್’ಗಳಿಸಬೇಕಾಗಿದೆ.
ಮೊದಲ ದಿನದಾಟದಂತ್ಯಕ್ಕೆ 6 ವಿಕೆಟ್ ನಷ್ಟದಲ್ಲಿ 86 ರನ್’ಗಳಿಸಿದ್ದ ಲಂಕಾ ತಂಡ, ಭಾನುವಾರ 109 ರನ್’ಗಳಿಸುವಷ್ಟರಲ್ಲಿ ಸರ್ವಪತನ ಕಂಡಿತು.
ಜಸ್ಪ್ರೀತ್ ಬುಮ್ರಾ ತವರು ನೆಲದಲ್ಲಿ ಚೊಚ್ಚಲ 5 ವಿಕೆಟ್ ಸಾಧನೆ ಮಾಡಿದರೆ, ಆರ್.ಅಶ್ವಿನ್ ಹಾಗೂ ಮುಹಮ್ಮದ್ ಶಮಿ ತಲಾ ಎರಡು ವಿಕೆಟ್ ಪಡೆದರು.
143 ರನ್’ಗಳ ಮೊದಲ ಇನ್ನಿಂಗ್ಸ್ ಮುನ್ನಡೆಯೊಂದಿಗೆ ಬ್ಯಾಟಿಂಗ್ ಆರಂಭಿಸಿದ ಟೀಮ್ ಇಂಡಿಯಾ, 9 ವಿಕೆಟ್ ನಷ್ಟದಲ್ಲಿ 303 ರನ್’ಗಳಿಸಿದ್ದ ವೇಳೆ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಶ್ರೇಯಸ್ ಅಯ್ಯರ್ 67 ರನ್’ಗಳಿಸಿದರೆ, ವಿಕೆಟ್ ಕೀಪರ್ ರಿಷಭ್ ಪಂತ್ ಅರ್ಧಶತಕ ಪೂರೈಸಿ ವಿಕೆಟ್ ಒಪ್ಪಿಸಿದರು. ರೋಹಿತ್ ಶರ್ಮಾ 46, ಹನುಮ ವಿಹಾರಿ 35 ಹಾಗೂ ವಿರಾಟ್ ಕೊಹ್ಲಿ 13 ರನ್ ಗಳಿಸಿದರು. ಲಂಕಾ ಪರ ಜಯವಿಕ್ರಮ 4 ಹಾಗೂ ಎಂಬುಲ್’ದೆನಿಯಾ 3 ವಿಕೆಟ್ ಪಡೆದು ಮಿಂಚಿದರು.