ಇಂಪಾಲ: ಇತ್ತೀಚೆಗೆ ನಡೆದ ಮಣಿಪುರ ಅಸೆಂಬ್ಲಿ ಚುನಾವಣೆಯಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಬಿಜೆಪಿ ಪಕ್ಷವು ಸರ್ಕಾರ ರಚನೆಗೆ ಮುಂದಾಗಿದ್ದು, ಸಂಯುಕ್ತ ಜನತಾ ದಳ (ಜೆಡಿಯು) ತನ್ನ ಆರು ಶಾಸಕರೊಂದಿಗೆ ಬಿಜೆಪಿಗೆ ಬೆಂಬಲ ಸೂಚಿಸಿದೆ.
ಮಣಿಪುರ ಜನರ ಹಿತದೃಷ್ಟಿಯಿಂದ ಸರ್ಕಾರ ರಚನೆಯಲ್ಲಿ ಬಿಜೆಪಿಗೆ ಬೆಂಬಲ ಸೂಚಿಸಲು ಜೆಡಿಯು ನಿರ್ಧರಿಸಿದೆ ಎಂದು ರಾಷ್ಟೀಯ ಕಾರ್ಯದರ್ಶಿ ಮುಹಮ್ಮದ್ ನಿಸಾರ್ ತನ್ನ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಚುನಾವಣಾ ಪ್ರಣಾಳಿಕೆ ಅಂಶಗಳ ಅನುಷ್ಠಾನ, ಜನರಿಗೆ ನೀಡಿದ್ದ ಭರವಸೆ ಮತ್ತು ಉದ್ದೇಶಗಳನ್ನು ಈಡೇರಿಸುವಂತೆ ಜೆಡಿಯು ಬಿಜೆಪಿಯನ್ನು ಒತ್ತಾಯಿಸಿದೆ.
ಇತ್ತೀಚೆಗೆ ನಡೆದ ಮಣಿಪುರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಯು 38 ಅಭ್ಯರ್ಥಿಗಳನ್ನು ಕಣಕ್ಕಿಳಿಸಿ, 6 ಸ್ಥಾನಗಳನ್ನು ಗೆದ್ದುಕೊಂಡಿತ್ತು.
ಪ್ರಾದೇಶಿಕವಾಗಿ ಬಿಜೆಪಿಯ ಮಿತ್ರ ಪಕ್ಷವಾದ ನಾಗಾ ಪೀಪಲ್ಸ್ ಫ್ರಂಟ್ (NPF) ಕೂಡ ಬೆಂಬಲ ಘೋಷಿಸಿದ್ದು, NPF ಪಕ್ಷದಿಂದ 10 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಆ ಪೈಕಿ ಐದು ಸ್ಥಾನಗಳನ್ನು ಗೆದ್ದಿತ್ತು.
ಈ ಮಧ್ಯೆ ನೂತನ ಸರ್ಕಾರದ ಸಚಿವ ಸಂಪುಟದಲ್ಲಿ ಹಲವು ಮಂತ್ರಿಗಳನ್ನು ಪಡೆಯುವ ಸಾಧ್ಯತೆಯಿದೆ ಎಂದು NPF ಮೂಲಗಳಿಂದ ತಿಳಿದು ಬಂದಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.
ಈಶಾನ್ಯ ವಲಯದ ಉಸ್ತುವಾರಿ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಫಕ್ ಅಹ್ಮದ್ ಖಾನ್ ಅವರ ಸಮ್ಮುಖದಲ್ಲಿ ಸಭೆ ಸೇರಿದ ಪಕ್ಷವು ಖುಮುಚ್ಚಮ್ ಜೋಯ್ ಕಿಸಾನ್ ಸಿಂಗ್ ಅವರನ್ನು ಜೆಡಿಯು ಶಾಸಕಾಂಗ ಪಕ್ಷದ ನಾಯಕನಾಗಿ ಆವಿರೋಧವಾಗಿ ಆಯ್ಕೆ ಮಾಡಲಿದ್ದಾರೆ ಎಂದು ಹೇಳಲಾಗಿದೆ.