ಯೆಮೆನ್ ನಲ್ಲಿ ಕೇರಳ ಮಹಿಳೆಗೆ ಗಲ್ಲುಶಿಕ್ಷೆ: ಕೇಂದ್ರ ಸರ್ಕಾರದ ಮಧ್ಯಸ್ಥಿಕೆ ಕೋರಿ ದೆಹಲಿ ಹೈಕೋರ್ಟ್ ಗೆ ಅರ್ಜಿ

Prasthutha|

ನವದೆಹಲಿ: ಅರಬ್ ರಾಷ್ಟ್ರ ಯೆಮೆನ್ ಪ್ರಜೆಯೊಬ್ಬರ ಹತ್ಯೆಗಾಗಿ ಯೆಮೆನ್ ನಲ್ಲಿ ಮರಣದಂಡನೆಗೆ ಗುರಿಯಾಗಿರುವ ಕೇರಳ ಮಹಿಳೆಯನ್ನು ರಕ್ಷಿಸಲು ರಾಜತಾಂತ್ರಿಕ ಮಧ್ಯಸ್ಥಿಕೆ ಆರಂಭಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಲು ಕೋರಿ ದೆಹಲಿ ಹೈಕೋರ್ಟ್ ಗೆ ಮನವಿ ಸಲ್ಲಿಸಲಾಗಿದೆ.

- Advertisement -

ಸೇವ್ ನಿಮಿಷಾ ಪ್ರಿಯಾ ಅಂತಾರಾಷ್ಟ್ರೀಯ ಕ್ರಿಯಾ ಸಮಿತಿ ಎಂಬ ಸಂಘಟನೆ ಸಲ್ಲಿಸಿದ ಮನವಿಯಲ್ಲಿ, ಕೊಲೆಯಾದ ವ್ಯಕ್ತಿಯ ಕುಟುಂಬದೊಂದಿಗೆ ಸಂಧಾನ ಪ್ರಾರಂಭಿಸಲು ಸರ್ಕಾರವನ್ನು ಕೋರಿದೆ, ಮೃತರ ಕುಟುಂಬಕ್ಕೆ ಪರಿಹಾರ ಧನ (ಬ್ಲಡ್ ಮನಿ) ನೀಡುವುದರಿಂದ ನಿಮಿಷಾರ ಪ್ರಾಣ ಉಳಿಸಬಹುದು ಎಂದು ಸಂಘಟನೆ ಹೇಳಿದೆ.

ನಿಮಿಷ ಪ್ರಿಯಾ ಯೆಮೆನ್ ನಲ್ಲಿ ನರ್ಸ್ ಆಗಿದ್ದರು. 2017ರಲ್ಲಿ ಯೆಮೆನ್ ಪ್ರಜೆಯನ್ನು ಕೊಂದದ್ದಕ್ಕಾಗಿ ಅವರಿಗೆ ಮರಣ ದಂಡನೆ ವಿಧಿಸಲಾಗಿದೆ. ತಲಾಲ್ ಅಬ್ದೋ ಮಹದಿ ಎಂಬ ವ್ಯಕ್ತಿಗೆ ನಿದ್ರಾಜನಕ ಚುಚ್ಚುಮದ್ದು ನೀಡಿ ಆತನಿಂದ ನಿಮಿಷಾ ತನ್ನ ಪಾಸ್ಪೋರ್ಟ್ ಹಿಂಪಡೆಯಲು ಯತ್ನಿಸಿದ್ದರು. ಓವರ್ ಡೋಸ್ ನಿಂದಾಗಿ ಮಹದಿ ಮೃತಪಟ್ಟಿದ್ದ ಎಂದು ವಕೀಲ ಸುಭಾಷ್ ಚಂದ್ರನ್ ಕೆ ಆರ್ ಅವರ ಮೂಲಕ ಸಲ್ಲಿಸಿರುವ ಮನವಿಯಲ್ಲಿ ತಿಳಿಸಲಾಗಿದೆ.

- Advertisement -

ಅಲ್ಲದೇ ಮೆಹದಿ, ನಿಮಿಷಾರನ್ನು ಮದುವೆಯಾಗಿರುವುದಾಗಿ ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದ. ಸ್ವಂತ ಕ್ಲಿನಿಕ್ ಆರಂಭಿಸಲು ನಿಮಿಷಾ ಸಹಾಯ ಕೇಳಿದಾಗ ಆತ ಆಕೆಗೆ ಆರ್ಥಿಕವಾಗಿ ಮೋಸ ಮಾಡಿ ನಂತರ ಹಿಂಸಿಸಲು ಆರಂಭಿಸಿದ್ದ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. 2020ರಲ್ಲಿ ನಿಮಿಷಾಗೆ ಯೆಮೆನ್ ನ್ಯಾಯಾಲಯ ಮರಣದಂಡನೆ ವಿಧಿಸಿತ್ತು, ಸನಾದಲ್ಲಿರುವ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಲಾಗಿದ್ದರೂ ಅದು ತಿರಸ್ಕೃತವಾಗಿತ್ತು.

ಯೆಮೆನ್ ಸುಪ್ರೀಂ ಕೋರ್ಟ್ ಅಥವಾ ಸುಪ್ರೀಂ ನ್ಯಾಯಾಂಗ ಮಂಡಳಿಗೆ ಮೇಲ್ಮನವಿ ಸಲ್ಲಿಸಲು ಮತ್ತೊಂದು ಅವಕಾಶವಿದ್ದರೂ, ಆಕೆ ಕೆಳ ನ್ಯಾಯಾಲಯ ನೀಡಿದ ಶಿಕ್ಷೆಯಿಂದ ಪಾರಾಗುವ ಸಾಧ್ಯತೆಯಿಲ್ಲ. ಹೀಗಾಗಿ ಮೃತ ವ್ಯಕ್ತಿಯ ವಾರಸುದಾರರಿಗೆ ಪರಿಹಾರ ಧನ ನೀಡುವುದು ಆಕೆಯನ್ನು ಮರಣದಂಡನೆಯಿಂದ ಪಾರಾಮಾಡುವ ಏಕೈಕ ಭರವಸೆಯಾಗಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

(ಕೃಪೆ: ಬಾರ್ & ಬೆಂಚ್)



Join Whatsapp