ಲಕ್ನೋ: ಪಂಚರಾಜ್ಯಗಳ ಚುನಾವಣಾ ಫಲಿತಾಂಶಗಳು ಘೋಷಣೆಯಾದ ಬಳಿಕ ಬಿಜೆಪಿ ಪಾಳಯದಲ್ಲಿ ಸಂಭ್ರಮ ಮುಗಿಲು ಮುಟ್ಟಿದರೆ, ವಿರೋಧ ಪಕ್ಷಗಳು ಆತ್ಮಾವಲೋಕನದಲ್ಲಿ ತೊಡಗಿವೆ. ಈ ನಡುವೆ ಚುನಾವಣೆಯಲ್ಲಿ ಒಂದೆಡೆ ಹಾಲಿ-ಮಾಜಿ ಮುಖ್ಯಮಂತ್ರಿಗಳನ್ನು ಮತದಾರ ಮನೆಗೆ ಕಳುಹಿಸಿದ್ದಾನೆ. ಮತ್ತೊಂದೆಡೆ ಉತ್ತರಪ್ರದೇಶದ ಚುನಾವಣಾ ಕಣದಲ್ಲಿ ಇದ್ದ ಟಾಪ್ -3 ಶ್ರೀಮಂತ ಅಭ್ಯರ್ಥಿಗಳು ಕೂಡ ಚುನಾವಣಾ ರಣರಂಗದಲ್ಲಿ ಮಕಾಡೆ ಮಲಗಿದ್ದಾರೆ.
ಉತ್ತರಪ್ರದೇಶದ ಚುನಾವಣಾ ಅಖಾಡದಲ್ಲಿ ಶ್ರೀಮಂತ ಅಭ್ಯರ್ಥಿಯಾಗಿದ್ದ ಕಾಂಗ್ರೆಸ್’ನ ನವಾಬ್ ಖಾಝಿಮ್ ಅಲಿ ಖಾನ್, ರಾಂಪುರ್ ವಿಧಾನಸಭಾ ಕ್ಷೇತ್ರದಲ್ಲಿ ಹೀನಾಯವಾಗಿ ಸೋಲು ಕಂಡಿದ್ದಾರೆ.
ರಾಂಪುರದ ಶ್ರೀಮಂತ ‘ನವಾಬ್’ ಕುಟುಂಬದ ಖಾಝಿಮ್ ಅಲಿ ಖಾನ್, ನಾಮಪತ್ರ ಸಲ್ಲಿಸುವ ವೇಳೆ 296 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಘೋಷಿಸಿದ್ದರು.
ಖಾಝಿಮ್ ಎದುರಾಳಿ ಸಮಾಜವಾದಿ ಪಕ್ಷದ ಪ್ರಬಲ ನಾಯಕ ಅಝಂ ಖಾನ್ ಒಟ್ಟು 1,01,245 ಮತಗಳನ್ನು ಪಡೆದರೆ, ಕಾಂಗ್ರೆಸ್’ನ ಖಾಝಿಮ್ ಖಾನ್ ಕೇವಲ 3374 ಮತಗಳನ್ನಷ್ಟೆ ಪಡೆಯಲು ಶಕ್ತರಾಗಿದ್ದಾರೆ. ವಿಶೇಷವೆಂದರೆ ಅಝಂ ಖಾನ್ ಜೈಲಿನಲ್ಲಿದ್ದುಕೊಂಡೇ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ರಾಂಪುರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಹನಿ ಸೆಕ್ಸೇನಾ 40,105 ಮತಗಳನ್ನು ಪಡೆಯುವ ಮೂಲಕ ದ್ವಿತೀಯ ಸ್ಥಾನಿಯಾದರು.
ಉತ್ತರ ಪ್ರದೇಶದ ಮುಬಾರಕ್’ಪುರ್ ಕ್ಷೇತ್ರದಿಂದ ಎಐಎಂಐಎಂ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ 196 ಕೋಟಿ ರೂಪಾಯಿ ಆಸ್ತಿಯ ಒಡೆಯ ಶಾ ಆಲಂ 36,460 ಮತಗಳನ್ನು ಪಡೆಯುವ ಮೂಲಕ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು.
ಉತ್ತರಪ್ರದೇಶದ ಮೂರನೇ ಶ್ರೀಮಂತ ಅಭ್ಯರ್ಥಿಯಾಗಿದ್ದ ಸುಪ್ರಿಯಾ ಅರೋನ್ ಕೂಡ ಚುನಾವಣೆಯಲ್ಲಿ ಕಮಾಲ್ ಮಾಡುವಲ್ಲಿ ಎಡವಿದ್ದಾರೆ. ಬರೇಲ್ವಿ ಕ್ಷೇತ್ರದಿಂದ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ 157 ಕೋಟಿ ರೂಪಾಯಿ ಆಸ್ತಿಯ ಒಡೆತಿ ಸುಪ್ರಿಯಾ, 10,768 ಮತಗಳ ಅಂತರದಿಂದ ಸೋಲನುಭವಿಸಿದ್ದಾರೆ.
296 ಕೋಟಿ ರೂಪಾಯಿ ಆಸ್ತಿಯ ಒಡೆಯ ಪಡೆದಿದ್ದು ಕೇವಲ 4 ಸಾವಿರ ಮತ ! ಟಾಪ್-3 ಶ್ರೀಮಂತ ಅಭ್ಯರ್ಥಿಗಳಿಗೆ ಸಿಗದ ಗೆಲುವಿನ ಸಿಹಿ !
Prasthutha|