ಶಾಂಘೈ: ಕೊರೊನಾ ವೈರಸ್ ಮೊಟ್ಟ ಮೊದಲ ಬಾರಿಗೆ ಕಾಣಿಸಿಕೊಂಡಿದ್ದ ಚೀನಾದಲ್ಲಿ ಇದೀಗ ಮತ್ತೆ ಕೋವಿಡ್-19 ಪ್ರಕರಣಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಈಶಾನ್ಯ ಚೀನಾದ ಚಾಂಗ್’ಚುನ್ ನಗರದಲ್ಲಿ ಲಾಕ್’ಡೌನ್ ಹೇರಲಾಗಿದೆ.
ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ 90 ಲಕ್ಷ ಜನರಿರುವ ಉತ್ತರದ ನಗರದ ಮೇಲೆ ಲಾಕ್‌ಡೌನ್ ಹೇರಲಾಗಿದೆ. ಜತೆಗೆ ಕೊರೊನಾ ನಿಯಂತ್ರಣಕ್ಕಾಗಿ ಶಾಂಘೈನಲ್ಲಿ ಶಾಲೆಗಳನ್ನು ಮುಚ್ಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಾರ್ಚ್ 10ರಂದು ಚೀನಾದಲ್ಲಿ ಸಾವಿರಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ಕಂಡುಬಂದಿವೆ.
ಜಿಲಿನ್ ಪ್ರಾಂತ್ಯದ ರಾಜಧಾನಿ ಮತ್ತು ಪ್ರಮುಖ ಕೈಗಾರಿಕಾ ನೆಲೆಯಾಗಿರುವ ಚಾಂಗ್’ಚುನ್ ನಿವಾಸಿಗಳಿಗೆ ಮನೆಯಿಂದಲೇ ಕೆಲಸ ನಿರ್ವಹಿಸಲು ಆದೇಶಿಸಲಾಗಿದೆ.
ದೈನಂದಿನ ಅಗತ್ಯವಸ್ತುಗಳನ್ನು ಖರೀದಿಸಲು ಎರಡು ದಿನಗಳಿಗೊಮ್ಮೆ ಪ್ರತಿ ಮನೆಯ ಓರ್ವ ಸದಸ್ಯನಿಗೆ ಅನುಮತಿ ನೀಡಲಾಗಿದೆ. ಒಬ್ಬರಿಂದ ಮತ್ತೊಬ್ಬರಿಗೆ ಬಹುವೇಗವಾಗಿ ಹರಡುವ ಕೊರೊನಾ ವೈರಸ್ಸಿನ ಒಮೈಕ್ರಾನ್ ತಳಿಯ ಪರಿಣಾಮ ಚೀನಾದಲ್ಲಿ ಕೋವಿಡ್ ಸೋಂಕು ಅತಿ ವೇಗವಾಗಿ ವ್ಯಾಪಿಸುತ್ತಿದೆ. ಈ ಹಿನ್ನೆಲೆಯಲ್ಲಿ ಸೋಂಕಿತರ ತ್ವರಿತ ಪತ್ತೆಗಾಗಿ ರ‍್ಯಾಪಿಡ್ ಆಯಂಟಿಜೆನ್ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ.
2020 ರಲ್ಲಿ ಕೊರೊನಾ ವೈರಸ್’ನ ಆರಂಭಿಕ ದಿನಗಳ ನಂತರ ಇದೇ ಮೊದಲ ಬಾರಿಗೆ ಈ ವಾರ ಸೋಂಕಿತರ ಸಂಖ್ಯೆಯು 1,000 ದಾಟಿದೆ. ಮೂರು ವಾರಗಳ ಹಿಂದೆ ಸೋಂಕಿಗೊಳಗಾದವರ ಸಂಖ್ಯೆ 100 ಕ್ಕಿಂತಲೂ ಕಡಿಮೆ ಇತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.