ಕೋಲ್ಕತ್ತಾ: ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿ ಜನಾದೇಶದಿಂದಲ್ಲ, ಬದಲಾಗಿ ಯಂತ್ರಗಳ ನೆರವಿನೊಂದಿಗೆ ಗೆಲುವು ಸಾಧಿಸಿದೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ
ಪ್ರಸಕ್ತ ಚುನಾವಣೆಯಲ್ಲಿ ಬಿಜೆಪಿಯ ಗೆಲುವಿನ ಕುರಿತು ಅನುಮಾನ ವ್ಯಕ್ತಪಡಿಸಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಮತಾ ಬ್ಯಾನರ್ಜಿ, ಬಿಜೆಪಿ ಜನಾದೇಶದಿಂದಲ್ಲ, ಬದಲಾಗಿ ಇವಿಎಂ, ಕೇಂದ್ರ ಪಡೆ ಮತ್ತು ಏಜೆನ್ಸಿಗಳ ನೆರವಿನೊಂದಿಗೆ ಗೆಲುವು ಸಾಧಿಸಿದೆ ಎಂದು ತಿಳಿಸಿದ್ದಾರೆ.
2024 ರಲ್ಲಿ ಬಿಜೆಪಿಯನ್ನು ಸೋಲಿಸಲು ಕಾಂಗ್ರೆಸ್ ಪಕ್ಷವನ್ನು ಪರಿಗಣಿಸುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಹೇಳಿದ ಅವರು, ಬಿಜೆಪಿ ನಾಗಾಲೋಟಕ್ಕೆ ತಡೆ ನೀಡುವ ನಿಟ್ಟಿನಲ್ಲಿ ಪ್ರತಿಪಕ್ಷಗಳು ಒಗ್ಗಟ್ಟಾಗುವ ಕುರಿತು ಗಂಭೀರ ಚರ್ಚೆ ನಡೆಸುವ ಅಗತ್ಯವಿದೆ ಎಂದು ತಿಳಿಸಿದ್ದಾರೆ.
ವಾರಣಾಸಿಯಲ್ಲಿ ನಡೆದ ಇವಿಎಂ ಯಂತ್ರ ಅಕ್ರಮ ಸಾಗಾಟಕ್ಕೆ ಸಂಬಂಧಿಸಿದಂತೆ ಹೆಚ್ಚವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಅಮಾನತುಗೊಳಿಸಲಾಗಿದೆ. ವಾಸ್ತವದಲ್ಲಿ ಅಖಿಲೇಶ್ ಅವರನ್ನು ಯಂತ್ರದ ನೆರವಿನಿಂದ ಉದ್ದೇಶ ಪೂರ್ವಕವಾಗಿ ಸೋಲುವಂತೆ ಮಾಡಲಾಗಿದೆ. ಇದರಿಂದ ಅಖಿಲೇಶ್ ಬೇಸರಿಸಬಾರದು. ಇದನ್ನು ಎದುರಿಸಿ ಅವರು ಜನರ ಬಳಿಗೆ ಹೋಗಬೇಕು ಎಂದು ಮನತಾ ಬ್ಯಾನರ್ಜಿ ಸಲಹೆ ನೀಡಿದ್ದಾರೆ.
2024 ರಲ್ಲಿ ಸಾರ್ವತ್ರಿಕ ಚುನಾವಣೆಯ ಕುರಿತು ಪ್ರತಿಕ್ರಿಯಿಸಿದ ಅವರು ಬಿಜೆಪಿ ವಿರುದ್ಧ ಹೋರಾಡಲು ಎಲ್ಲಾ ರಾಜಕೀಯ ಪಕ್ಷಗಳು ಒಟ್ಟಾಗಿ ಕೆಲಸ ಮಾಡಬೇಕು. ಇನ್ನು ಮುಂದಕ್ಕೆ ಕಾಂಗ್ರೆಸ್ ಅನ್ನು ಅವಲಂಭಿಸುವುದರಿಂದ ಯಾವುದೇ ಪ್ರಯೋಜನವಿಲ್ಲ. ಈ ಹಿಂದಿನ ಕಾಂಗ್ರೆಸ್ ತನ್ನ ಛಾಪನ್ನು ಕಳೆದುಕೊಂಡು ನಿರ್ಜೀವ ಹಂತ ತಲುಪಿದ್ದು, ಜನರ ಆಸಕ್ತಿ ಮತ್ತು ವಿಶ್ವಾಸವನ್ನು ಉಳಿಸುವಲ್ಲಿ ಎಡವಿದೆ. ಈ ನಿಟ್ಟಿನಲ್ಲಿ ಹಲವು ಪ್ರಾದೇಶಿಕ ಪಕ್ಷಗಳು ಒಟ್ಟಾಗಿ ಸೇರಿಕೊಂಡು ಜೊತೆಯಾಗಿ ಕೆಲಸ ಮಾಡುವ ಮೂಲಕ ಬಿಜೆಪಿಯನ್ನು ಸೋಲಿಸಲು ಮುಂದಡಿಯಿಡಬೇಕಾಗಿದೆ ಎಂದು ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.