ಹೊಸದಿಲ್ಲಿ: ಪಂಚರಾಜ್ಯ ಚುನಾವಣೆಯ ಫಲಿತಾಂಶಗಳ ಪೈಕಿ ನಾಲ್ಕು ರಾಜ್ಯಗಳಲ್ಲಿ ಬಿಜೆಪಿಯು ಗೆಲುವನ್ನು ಸಾಧಿಸಿದೆ. ಅಲ್ಲದೇ ಉತ್ತರ ಪ್ರದೇಶದಲ್ಲಿ ದಾಖಲೆಯ ಗೆಲುವನ್ನು ಕಂಡಿದ್ದು ಈ ಬಗ್ಗೆ ಶಿವಸೇನೆ ನಾಯಕ ಹಾಗೂ ಸಂಸದ ಸಂಜಯ್ ರಾವತ್ ಪ್ರತಿಕ್ರಿಯಿಸಿದ್ದಾರೆ. ಬಿಜೆಪಿಯ ಗೆಲುವಿನಲ್ಲಿ ಇಬ್ಬರ ಕೊಡುಗೆ ಇದೆ ಎಂದಿದ್ದು, ಈ ಇಬ್ಬರ ಕೊಡುಗೆಗಾಗಿ ಅವರಿಗೆ ಪದ್ಮವಿಭೂಷಣ ಅಥವಾ ಭಾರತ ರತ್ನ ನೀಡಬೇಕೆಂದು ರಾವತ್ ವ್ಯಂಗ್ಯವಾಡಿದ್ದಾರೆ.
ಬಿಜೆಪಿ ಗೆಲುವಲ್ಲಿ ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಹಾಗೂ ಎಐಎಂಐಎಂ ಮುಖ್ಯಸ್ಥ ಸಂಸದ ಅಸದುದ್ದೀನ್ ಉವೈಸಿ ಕೊಡುಗೆ ಇದೆ ಎಂದಿರುವ ರಾವತ್ ಇಬ್ಬರಿಗೂ ಪದ್ಮವಿಭೂಷಣ ಅಥವಾ ಭಾರತ ರತ್ನ ನೀಡಬೇಕೆಂದು ಹೇಳಿದ್ದಾರೆ.
ಉತ್ತರ ಪ್ರದೇಶದಲ್ಲಿ ಬಿಜೆಪಿಯು ದಾಖಲೆಯ ವಿಜಯವನ್ನು ಕಂಡಿದೆ. ಈ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದ ಸ್ಥಾನಗಳು 42 ರಿಂದ 125 ಕ್ಕೆ ಏರಿಕೆ ಕಂಡಿದೆ. ಬಿಜೆಪಿಯು 279 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದು ಈ ಸಾಧನೆಯು ಮಾಯಾವತಿ ಮತ್ತು ಉವೈಸಿ ಅವರ ಕೊಡುಗೆ ಎಂದು ಸಂಜಯ್ ರಾವತ್ ವಾಗ್ದಾಳಿ ನಡೆಸಿದ್ದಾರೆ.