ಚೆನ್ನೈ: ರಾಜ್ಯಸಭಾ ಸಂಸದ ಮತ್ತು ವಕೀಲ ಎನ್ ಆರ್ ಇಲಂಗೋ ಅವರ ಪುತ್ರ ರಾಕೇಶ್ ರಂಗನಾಥನ್ (21) ಗುರುವಾರ ಮುಂಜಾನೆ ತನ್ನ ಸ್ನೇಹಿತನೊಂದಿಗೆ ಪುದುಚೇರಿಗೆ ತೆರಳುತ್ತಿದ್ದಾಗ ವಿಲ್ಲುಪುರಂ ಜಿಲ್ಲೆಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
“ವಾಹನವು ಅತಿವೇಗದಲ್ಲಿ ಬರುತ್ತಿದ್ದಾಗ, ಹಸುವೊಂದು ಇದ್ದಕ್ಕಿದ್ದಂತೆ ರಸ್ತೆಯಲ್ಲಿ ಅಡ್ಡ ಬಂದಿದೆ. ಅವರು ಹಸುವಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಪ್ರಯತ್ನಿಸಿದಾಗ ನಿಯಂತ್ರಣ ಕಳೆದುಕೊಂಡರು, ”ಎಂದು ವಿಲ್ಲುಪುರಂ ಜಿಲ್ಲಾ ಪೊಲೀಸರು ತಿಳಿಸಿದ್ದಾರೆ.
ಸಹ ಪ್ರಯಾಣಿಕ ಕೆ ವೇದಾ ವಿಕಾಶ್ (21) ಎಂಬುವವರಿಗೆ ಗಂಭೀರ ಗಾಯಗಳಾಗಿದ್ದರೆ, ರಾಕೇಶ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇಬ್ಬರನ್ನೂ ಪುದುಚೇರಿ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ (ಪಿಮ್ಸ್) ಕರೆದೊಯ್ಯಲಾಯಿತು. ಘಟನೆ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಘಟನೆಯ ನಂತರ ತಮಿಳುನಾಡು ಮುಖ್ಯಮಂತ್ರಿ ಮತ್ತು ಡಿಎಂಕೆ ಅಧ್ಯಕ್ಷ ಎಂ ಕೆ ಸ್ಟಾಲಿನ್ ಅವರು ತಮ್ಮ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.