ಲಕ್ನೋ: ಪಂಚರಾಜ್ಯ ಚುನಾವಣಾ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಪ್ರತಿಕ್ರಿಯಿಸಿದ ಉತ್ತರ ಪ್ರದೇಶ ಸಚಿವ ಸತೀಶ್ ಮಹಾನಾ, ಪ್ರಸಕ್ತ ಚುನಾವಣೆಯಲ್ಲಿ ಹಿಂದೂ – ಮುಸ್ಲಿಮ್ ಓಲೈಕೆ ಮಾಡುವುದನ್ನು ಬಿಟ್ಟು ಎಲ್ಲಾ ಸಮುದಾಯದ ಪರವಾಗಿ ಕಾರ್ಯ ನಿರ್ವಹಿಸಿದ್ದೇವೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಪ್ರಚಂಡ ಬಹುಮತದಿಂದ ಗೆಲುವಿನತ್ತ ಮುಖ ಮಾಡಿದೆ ಎಂದು ತಿಳಿಸಿದ್ದಾರೆ.
ಪ್ರಧಾನಿ ಮೋದಿ ಮತ್ತು ಮುಖ್ಯಮಂತ್ರಿ ಯೋಗಿ ಅವರ ನಾಯಕತ್ವದಲ್ಲಿ ಈ ಚುನಾವಣೆಯಲ್ಲಿ ಪಕ್ಷಕ್ಕೆ ಅಭೂತಪೂರ್ವ ವಿಜಯ ಲಭಿಸಿದೆ. ಪ್ರಸಕ್ತ ಚುನಾವಣೆಯಲ್ಲಿ ಬಿಜೆಪಿ ಗಳಿಸಿದ ಮತಗಳ ಪ್ರಮಾಣದಲ್ಲಿ ಕೂಡ ಹೆಚ್ಚಳವಾಗಿದೆ ಎಂದು ಅವರು ತಿಳಿಸಿದ್ದಾರೆ.
ಸದ್ಯ ನಾವು ಭಾರತದಾದ್ಯಂತ ಅಭಿವೃದ್ಧಿಯ ಘೋಷಣೆಯೊಂದಿಗೆ ಮುಂದುವರಿಯುತ್ತೇವೆ ಮತ್ತು ಕೈಗಾರಿಕ ಉತ್ಪಾದನೆಗೆ ಒತ್ತು ನೀಡಲಾಗುವುದು. ಐಟಿಯಿಂದ ಎಲೆಕ್ಟ್ರಾನಿಕ್ ವರೆಗೆ ಉತ್ತರ ಪ್ರದೇಶಕ್ಕೆ ಬೃಹತ್ ಯೋಜನೆಯನ್ನು ನೀಡಲು ಉತ್ಸುಕವಾಗಿದ್ದೇವೆ ಎಂದು ಸತೀಶ್ ಮಹಾನಾ ತಿಳಿಸಿದ್ದಾರೆ.
ಮುಂದಿನ ದಿನಗಳಲ್ಲಿ ನಾವು ಹಿಂದೂ, ಮುಸ್ಲಿಮ್, ಕ್ರೈಸ್ತರು ಸೇರಿದಂತೆ ಪ್ರತಿಯೊಬ್ಬರ ಪರವಾಗಿ ನಿಲ್ಲಲು ಬಯಸುತೇವೆ. ನಮ್ಮ ಯೋಜನೆಗಳನ್ನು ಹಿಂದೂ – ಮುಸ್ಲಿಮ್ ಎಂದು ಪ್ರತ್ಯೇಕಿಸದೆ ಎಲ್ಲರಿಗಾಗಿ ರೂಪಿಸುತ್ತೇವೆ. ಈ ಪ್ರಯಾಣದಲ್ಲಿ ನಾವು ಎಲ್ಲರನ್ನೂ ಜೊತೆಯಲ್ಲಿ ಕೊಂಡೊಯ್ಯುತ್ತೇವೆ. ಮೋದಿ ಮತ್ತು ಯೋಗಿ ನೇತೃತ್ವದಲ್ಲಿ ಜೊತೆಯಾಗಿ ನಾವು ಕಾರ್ಯ ನಿರ್ವಹಿಸುತ್ತೇವೆ ಎಂದು ಮಹಾನಾ ತಿಳಿಸಿದ್ದಾರೆ.