ಮತಾಂತರ ನಿಷೇಧ ಕಾಯ್ದೆ: ಬಿ.ಎಸ್.ವೈ ವಿರುದ್ಧ ಸ್ವಪಕ್ಷೀಯರದ್ದೆ ಹುನ್ನಾರ?!

Prasthutha|

-ಎನ್.ರವಿಕುಮಾರ್

- Advertisement -

ಕರ್ನಾಟಕದಲ್ಲಿ ಧರ್ಮಾಧಾರಿತ ಕಾಯ್ದೆಗಳನ್ನು ಜಾರಿಗೊಳಿಸಬೇಕೆಂಬ ಕೂಗು ಆಡಳಿತಾರೂಢ ಬಿಜೆಪಿಯಲ್ಲೆ ಕೇಳಿ ಬರತೊಡಗಿದ್ದು, ಅತ್ಯಂತ ಪ್ರಮುಖವಾಗಿ ಗೋಹತ್ಯೆ ನಿಷೇಧ ಮತ್ತು ಲವ್ ಜಿಹಾದ್ ತಡೆಯಬೇಕೆಂಬ ನಿಟ್ಟಿನಲ್ಲಿ ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೊಳಿಸುವ ಬಗ್ಗೆ ನ. 5ರಂದು ಮಂಗಳೂರಿನಲ್ಲಿ ನಡೆದ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲೇ ಚರ್ಚೆಯ ವಿಷಯಸೂಚಿಯಾಗಿಯೂ ಪ್ರಸ್ತಾಪ ಮಾಡಲಾಗಿದೆ. ಈ ಪ್ರಸ್ತಾಪಗಳು ಇಂದು ನೆನ್ನೆಯದಲ್ಲ. 2009ರಲ್ಲಿ ಕೇರಳದಲ್ಲಿ ಕೇಳಿ ಬಂದ ಮುಸ್ಲಿಮ್ ಯುವಕ – ಹಿಂದೂ ಹುಡುಗಿಯ ನಡುವಿನ ಪ್ರೇಮ ಪ್ರಕರಣಗಳಿಗೆ ಹಿಂದೂ ಮತಾಂಧರು ಲವ್ ಜಿಹಾದ್ ಎಂಬ ಹೆಸರು ಕೊಟ್ಟು ಇದನ್ನು ರಾಷ್ಟ್ರವ್ಯಾಪಿ ಪ್ರಚಾರಕ್ಕೆ ತಂದಾಗಲೇ ಇದಕ್ಕೊಂದು ಕಾನೂನು ರೂಪಿಸಬೇಕೆಂಬ ಒತ್ತಾಯವನ್ನು ವಿಶ್ವ ಹಿಂದೂ ಪರಿಷದ್ ಮತ್ತು ಪರಿವಾರ ಅಂಗ ಸಂಘಟನೆಗಳು ಒತ್ತಾಯಿಸುತ್ತಾ ಬಂದಿವೆ. ಅದು ಕ್ರಮೇಣ ಹಿಂದೂ ಮತಗಳ ಧ್ರುವೀಕರಣದ ರಾಜಕೀಯ ತಂತ್ರವೂ ಆಗಿ ಈಗ ಬಳಸಲ್ಪಡುತ್ತಿದೆ. 2009ರಲ್ಲಿ ಹಿಂದೂ ಹುಡುಗಿಯನ್ನು ಪ್ರೇಮದ ಸೋಗಿನಲ್ಲಿ ಮುಸ್ಲಿಮ್ ಯುವಕ ಬಲವಂತವಾಗಿ ಮತಾಂತರಗೊಳಿಸುವ ಲವ್ ಜಿಹಾದ್ ಬಹುತೇಕ ಪ್ರಕರಣಗಳು ಕಂಡು ಬಂದಿದೆ. ಇದರ ಹಿಂದೆ ಮುಸ್ಲಿಮ್ ಸಂಘಟನೆಯ ಸಂಚು ಇದೆ ಎಂದು ಕೇರಳದ ಅಂದಿನ ಡಿಜಿಪಿ ಜಾಕಬ್ ಪನ್ನೋಸ್ ಹೈಕೋರ್ಟ್ ಮುಂದೆ ವರದಿ ಮಂಡಿಸಿದಾಗ ಅದನ್ನು ಹೈಕೋರ್ಟ್ ನ್ಯಾಯಮೂರ್ತಿ ಕೆ.ಟಿ ಶಂಕರನ್ ಸಾರಾಸಗಟಾಗಿ ನಿರಾಕರಿಸುತ್ತಾರೆ. ಆ ನಂತರ ಎರಡು ವರ್ಷಗಳ ತನಿಖೆಯ ಬಳಿಕ, ಲವ್ ಜಿಹಾದ್ ಅಸ್ತಿತ್ವಕ್ಕೆ ಯಾವುದೇ ನಿರ್ಣಾಯಕ ಪುರಾವೆಗಳು ದೊರೆತಿಲ್ಲ ಎಂಬ ಪುನ್ನೂಸ್ ಹೇಳಿಕೆಗಳನ್ನು ಅನುಸರಿಸಿ ನ್ಯಾಯಮೂರ್ತಿ ಎಂ.ಶಶಿಧರನ್ ನಂಬಿಯಾರ್ ತನಿಖೆಯನ್ನು ಸಮಾಪನಗೊಳಿಸುತ್ತಾರೆ. ಕೇರಳದ ಡಾ.ಹಾದಿಯಾ ಪ್ರೇಮ ಪ್ರಕರಣದಲ್ಲಿ ಸುಪ್ರೀಂ ಕೋರ್ಟು ಕೂಡ ಲವ್ ಜಿಹಾದ್ ಅಂದರೆ ಮತಾಂತರಕ್ಕಾಗಿ ಬಲವಂತದ ಮದುವೆ ಎಂಬ ವಾದವನ್ನು ತಳ್ಳಿ ಹಾಕಿದ್ದು, ರಾಷ್ಟ್ರೀಯ ತನಿಖಾದಳ ತನಿಖೆ ನಡೆಸಿದ 11 ಪ್ರಕರಣಗಳಲ್ಲೂ ಲವ್ ಜಿಹಾದ್ ನ ಯಾವುದೇ ಸಾಕ್ಷಿ-ಪುರಾವೆಗಳು ಸಿಕ್ಕಿಲ್ಲ ಎಂಬುದು ಧರ್ಮಾಂಧರ ಕೇಡನ್ನು ಜಗಜ್ಜಾಹೀರು ಮಾಡಿತು. ಇಲ್ಲಿಂದ ಆರಂಭಗೊಂಡು ಸುಪ್ರೀಂ ಕೋರ್ಟ್ ವರೆಗೂ ಕಲ್ಪಿತ ಲವ್ ಜಿಹಾದ್ ಪ್ರಕರಣಗಳು ಬಂದು ನಿಂತಿವೆ. ಆದರೆ ಕಾನೂನು ಪರಿಭಾಷೆಯಲ್ಲಿ ಲವ್ ಜಿಹಾದ್ ಎಂಬುದಕ್ಕೆ ಯಾವುದೇ ಮಾನ್ಯತೆ ಇಲ್ಲ. ಇದನ್ನೇ ಕೇಂದ್ರದ ಗೃಹ ಖಾತೆ ರಾಜ್ಯ ಸಚಿವ ಜಿ.ಕಿಶನ್ ರೆಡ್ಡಿ ಅವರು ಸಂಸತ್ತಿನಲ್ಲಿ ಅಧಿಕೃತ ಹೇಳಿಕೆ ನೀಡುತ್ತಾ ದೇಶದಲ್ಲಿ ಯಾವುದೇ ಕಾನೂನಿನಲ್ಲಿ ಲವ್ ಜಿಹಾದ್ ಎಂಬುದನ್ನು ವ್ಯಾಖ್ಯಾನಿಸಿಲ್ಲ.

ದೇಶದ ಯಾವುದೇ ತನಿಖಾ ಸಂಸ್ಥೆಯೂ ಈ ಲವ್ ಜಿಹಾದ್ ಬಗ್ಗೆ ಕೇಸು ದಾಖಲಿಸಿ ತನಿಖೆ ನಡೆಸುತ್ತಿಲ್ಲ ಎಂದಿದ್ದಾರೆ. ಮುಂದುವರೆದು ಸಂವಿಧಾನದ 25ನೇ ವಿಧಿಯಡಿ ಈ ದೇಶದ ಯಾವೊಬ್ಬ ಪ್ರಜೆಯೂ ಯಾವುದೇ ಧರ್ಮವನ್ನು ಹೊಂದುವ, ಆಚರಿಸುವ ಮತ್ತು ಅದರ ಪರವಾಗಿ ಪ್ರಚಾರ ಮಾಡುವ ಸ್ವಾತಂತ್ರ್ಯವನ್ನು ಹೊಂದಿದ್ದಾನೆ ಎಂಬುದನ್ನು ಹೇಳಿದರು. ಹೀಗಿದ್ದಾಗ್ಯೂ ಕರ್ನಾಟಕದಲ್ಲಿ ಈಗ ಮತಾಂತರ ನಿಷೇಧ ಕಾಯ್ದೆಯ ಕೂಗಿಗೆ ಮತ್ತೆ ಜೀವ ಬಂದಿದೆ. ಯಾವುದೇ ಧರ್ಮದ ಕೋಮು ರಾಜಕಾರಣ ಇಂದು ಮನುಷ್ಯರ ವ್ಯಕ್ತಿಗತ ಬದುಕನ್ನು ಆವರಿಸಿದೆ ಎಂಬುದಕ್ಕೆ ಅನೇಕ ಉದಾಹರಣೆಗಳು ಕಂಡು ಬರುತ್ತಿವೆ. ಹಿಂದೂ ಧರ್ಮದಲ್ಲಿನ ಅಸಮಾನತೆ, ಜಾತಿ ಶ್ರೇಣೀಕೃತ ವ್ಯವಸ್ಥೆಯಿಂದ ಬೇಸತ್ತ ಆದಿವಾಸಿ, ದಲಿತ ಸಮುದಾಯಗಳು ಕ್ರೈಸ್ತ ಧರ್ಮಕ್ಕೆ ಮತಾಂತರಗೊಳ್ಳುತ್ತಿರುವುದರ ವಿರುದ್ಧ ಆಕ್ರಮಣಕಾರಿ ಧೋರಣೆಗಳನ್ನು ತೋರಿದ ಹಿಂದೂ ಸಂಘಟನೆಗಳು ಲವ್ ಜಿಹಾದ್ ಹೆಸರಿನಲ್ಲಿ ಮುಸ್ಲಿಮ್ ಸಮುದಾಯವನ್ನು ಗುರಿಯಾಗಿಸಿಕೊಂಡು ಧರ್ಮದ್ವೇಷ ಬಿತ್ತುವ ಕೆಲಸವನ್ನು ನಿರಂತರವಾಗಿ ಮಾಡಿಕೊಂಡು ಬಂದಿವೆ. ಹಿಂದೂ ಹುಡುಗಿಯರನ್ನು ಮುಸ್ಲಿಮ್ ಯುವಕರು ಪ್ರೀತಿಸುವ ಸೋಗಿನಲ್ಲಿ ಸೆಳೆದು ಅವರನ್ನು ಮತಾಂತರ ಮಾಡಿ ಸಿಮಿಯಂತಹ ಮತಾಂಧ ಸಂಘಟನೆಗಳಿಗೆ ರವಾನಿಸುತ್ತಿದ್ದಾರೆ. ಇದೇ ಲವ್ ಜಿಹಾದ್ ಆಗಿದ್ದು, ಇದನ್ನು ತಡೆಗಟ್ಟಲು ಮತಾಂತರ ನಿಷೇಧ ಕಾಯ್ದೆ ಜಾರಿಗೊಳಿಸಬೇಕೆಂಬ ಕೂಗು ಈಗ ರಾಜ್ಯದಲ್ಲಿ ಆಡಳಿತಾರೂಢ ಬಿಜೆಪಿಯ ಜವಾಬ್ದಾರಿ ಸ್ಥಾನದಲ್ಲಿರುವವರಿಂದಲೇ ಆಗ್ರಹಗೊಳ್ಳುತ್ತಿರುವುದು ಯಡಿಯೂರಪ್ಪ ನೇತೃತ್ವದ ತಮ್ಮದೇ ಸರಕಾರಕ್ಕೆ ಸೆಡ್ಡು ಹೊಡೆಯುವ ಹೊಸ ಆಟವೊಂದು ಶುರುವಾದಂತಿದೆ. ಅಂತರ್ ಧರ್ಮೀಯ ಮತ್ತು ಅಂತರ್ ಜಾತಿಯ ವಿವಾಹಗಳಿಗೆ ಈ ನೆಲದ ಕಾನೂನಿನಲ್ಲಿ ಯಾವುದೇ ನಿರ್ಬಂಧಗಳಿಲ್ಲ. ಈ ದೇಶದ ಬಹುತ್ವದ ಭಾಗವಾಗಿ ಮತ್ತು ಮನುಷ್ಯಸಹಜ ಆಕರ್ಷಣೆ, ಮನೋಭಿಲಾಷೆಯ ಗುಣವಾಗಿ ಪ್ರೇಮ ವಿವಾಹಗಳು ಜಾತಿ, ಧರ್ಮ, ಪಂಥಗಳನ್ನು ಮೀರಿ ನಡೆಯುತ್ತಲೆ ಬಂದಿವೆ. ಹರಿಹರೆಯದ ಹೆಣ್ಣು ಗಂಡು ಪರಸ್ಪರ ಆಕರ್ಷಿತರಾಗಿ ಸಂಗಾತಿಗಳಾಗುವ ಪ್ರಕೃತಿದತ್ತ ಜೀವ ಸಹಜ ಸಂವೇದನೆಯನ್ನು ಧರ್ಮ, ಜಾತಿಯ ಗೂಟಕ್ಕೆ ಕಟ್ಟಿ ಅಮಾನುಷವಾಗಿ ವರ್ತಿಸುವ ಘಟನೆಗಳು 12ನೇ ಶತಮಾನದಿಂದಲೂ ನಡೆದುಕೊಂಡು ಬಂದಿದೆ.

- Advertisement -

 ದುರಾದೃಷ್ಟವಶಾತ್ ಇವೆಲ್ಲವೂ ಈಗ ಮೂಲಭೂತವಾದ, ರಾಜಕೀಯ ಲಾಭದ ಅಸ್ತ್ರಗಳಾಗಿ ಬಳಕೆಯಾಗುತ್ತಿವೆ. ಪ್ರೇಮ ಎಂಬುದು ಹೆಣ್ಣು ಮತ್ತು ಗಂಡಿನ ನಡುವಿನ ಅತ್ಯಂತ ಖಾಸಗಿ ಸಂಗತಿ, ಯಾರೊಬ್ಬರು ತನ್ನ ಇಷ್ಟದ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಪರಮಾಧಿಕಾರ ಇದ್ದರೂ ಅದನ್ನು ನಿಯಂತ್ರಿಸುವ ಶಕ್ತಿಗಳು ದಿನೇ ದಿನೇ ಅಟ್ಟಹಾಸ ಮೆರೆಯುತ್ತಿರುವುದನ್ನು ಕಾಣುವಂತಾಗಿದೆ. ಅಂತರ್ ಧರ್ಮೀಯ ವಿವಾಹಗಳನ್ನು ವಿರೋಧಿಸುತ್ತಿರುವ ಬಿಜೆಪಿಯಲ್ಲೇ ಅಗ್ರ ಶ್ರೇಣಿ ನಾಯಕರುಗಳಾದ ಅಡ್ವಾಣಿ, ವಿಶ್ವಹಿಂದೂ ಪರಿಷತ್ ನ ಮುಂಚೂಣಿ ನಾಯಕರಾದ ಅಶೋಕ್ ಸಿಂಘಾಲ್, ಮುರಳಿ ಮನೋಹರ ಜೋಷಿ ಸುಬ್ರಹ್ಮಣ್ಯ ಸ್ವಾಮಿಯಂತವರ ಕುಟುಂಬಗಳು ಮುಸ್ಲಿಮ್ ಧರ್ಮೀಯರೊಂದಿಗೆ ವಿವಾಹ ನಂಟನ್ನು ಹೊಂದಿದ್ದಾರೆ. ಹೀಗಿರುವಾಗಲೆ ಅದೇ ಪಕ್ಷದ ಮಂದಿ ಅಂತರ್ ಧರ್ಮೀಯ ವಿವಾಹಗಳನ್ನು ನಿರ್ಬಂಧಿಸುವ ಅದರ ವಿರುದ್ಧ ಹೋರಾಡುವುದು ಕೇವಲ ರಾಜಕೀಯ ಲಾಭಕೋರತನದ ನಡೆಯಷ್ಟೆ. ರಾಜ್ಯದಲ್ಲಿ ಹಿಂದೂ ಧರ್ಮದೊಳಗೆ ಅಂತರ್ ಜಾತಿ ವಿವಾಹಗಳನ್ನು ಒಪ್ಪಿಕೊಳ್ಳದೆ ಮರ್ಯಾದಾ ಹತ್ಯೆಗಳು, ಅಂತರ್ ಜಾತಿ ವಿವಾಹವಾದ ದಂಪತಿಗಳನ್ನು ಬರ್ಬರವಾಗಿ ಕೊಲ್ಲುವ ಕೃತ್ಯಗಳು ನಿರಂತರವಾಗಿ ನಡೆಯುತ್ತಿವೆ. ಬಲಾಢ್ಯ ಜಾತಿಗಳ ಹೆಣ್ಣು ಮಕ್ಕಳೊಂದಿಗೆ ಪ್ರೇಮ ಬೆಸೆದುಕೊಂಡ ದುರ್ಬಲ ಜಾತಿಗಳ ಹುಡುಗರು ಹೆಣವಾಗುತ್ತಿದ್ದಾರೆ. ಹಿಂದೂ ಧರ್ಮದಲ್ಲಿನ ಜಾತಿ ವ್ಯವಸ್ಥೆಯ ಅವಮಾನಗಳಿಂದ ಜರ್ಝರಿತಗೊಂಡ ಜನರು ಇಂದು ಕ್ರೈಸ್ತ ಧರ್ಮ, ಬೌದ್ಧ ಧರ್ಮಗಳ ಕಡೆಗೆ ಹೆಜ್ಜೆ ಹಾಕುತ್ತಿದ್ದಾರೆ. ಅದು ವಿವಾಹ ರೂಪದಲ್ಲೂ ಕೂಡ ಇದೆ. ಹಿಂದೂ ಧರ್ಮದಲ್ಲಿನ ಜಾತಿ ಆಧಾರಿತ ರಣರೋಗವನ್ನು ಇಲ್ಲವಾಗಿಸಿ ಸಮಾನತೆ ಸಹಬಾಳ್ವೆಯನ್ನುಸೃಷ್ಟಿಸಲಾರದ ಸ್ವಯಂಘೋಷಿತ ಹಿಂದೂ ಶ್ರೇಷ್ಠರು ಮತಾಂತರ ನಿಷೇಧ ಕಾಯ್ದೆ ತರುವ ಉತ್ಸಾಹದಲ್ಲಿರುವುದು ಆತ್ಮವಂಚನೆಗಿಳಿದಿರುವುದು ನಿಚ್ಚಳವಾಗಿ ಕಾಣುತ್ತಿದೆ.

ಮುಸ್ಲಿಮ್ ಕುಟುಂಬವೊಂದು ತನ್ನ ಮನೆಗೆ ಸೊಸೆಯಾಗಿ ಬಂದ ಹಿಂದೂ ಹೆಣ್ಣು ಮಗಳಿಗೆ ಹಿಂದೂ ಸಂಪ್ರದಾಯದಂತೆ ಸೀಮಂತ ಮಾಡುವ ಕಮರ್ಷಿಯಲ್ ಜಾಹೀರಾತನ್ನೂ ಸಹಿಸಿಕೊಳ್ಳಲಾಗದ ಮತೀಯ ಶಕ್ತಿಗಳು ಇದರೊಳಗೆ ಗ್ರಹಿಸಬಹುದಾದ ಸೌಹಾರ್ದತೆಯ ಸೊಬಗನ್ನು ನಿರಾಕರಿಸುವ ಮೂಲಕ ಬೆತ್ತಲಾಗಿವೆ. ಜೀವ ವಿರೋಧಿ, ಸಹಬಾಳ್ವೆಯ ನಾಶವನ್ನು ಬೋಧಿಸುವ ವೈದಿಕ ಧರ್ಮದ ಮನುಸ್ಮೃತಿಯನ್ನು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸುಟ್ಟ ಚಾರಿತ್ರಿಕ ಸತ್ಯವನ್ನು ಪ್ರಶ್ನೆಯಾಗಿ ಕೇಳಿದ್ದಕ್ಕೆ ನಟ ಅಮಿತಾಬ್ ಬಚ್ಚನ್ ವಿರುದ್ಧ ಮುಗಿ ಬೀಳುವ, ಕೇಸು ದಾಖಲಿಸುವ ಹಿಂದುತ್ವದ ವೀರಕಲಿಗಳು ಭಾರತವನ್ನು ಹಿಮ್ಮುಖವಾಗಿ ಕೊಂಡೊಯ್ಯುತ್ತಿದ್ದಾರೆ. ಕಲ್ಲಡ್ಕ ಪ್ರಭಾಕರ್ ಭಟ್ ಎಂಬ ಚೆಡ್ಡಿ ಶೂರನಿಗೆ ದಕ್ಷಿಣ ಕನ್ನಡದ ಉಳ್ಳಾಲದಂತ ಬಹುಸಂಸ್ಕೃತಿಯ ಸೌಹಾರ್ದದ ನೆಲೆ ಪಾಕಿಸ್ತಾನದಂತೆ ಕಾಣುತ್ತದೆ.

ಕರ್ನಾಟಕದಲ್ಲಿ ಗೋಹತ್ಯೆ ನಿಷೇಧ, ಮತಾಂತರ ನಿಷೇಧ ಕಾಯ್ದೆ ಜಾರಿಯ ಕೂಗು ಮತ್ತದೆ ಹಿಂದೂ ಮತಗಳ ಕ್ರೋಢೀಕರಣ ತಂತ್ರದ ಭಾಗವೂ ಆಗಿದ್ದರೆ ಅದೇ ಕಾಲಕ್ಕೆ ಬಿ.ಎಸ್.ಯಡಿಯೂರಪ್ಪ ಅವರನ್ನು ಸಿ.ಎಂ. ಕುರ್ಚಿಯಿಂದ ಕೆಳಗಿಳಿಸುವ ಸಂಚೂ ಆಗಿದೆ ಎಂಬ ಅನುಮಾನ ದಟ್ಟವಾಗಿದೆ. ಕರ್ನಾಟಕದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಬಡ್ತಿ ಹೊಂದಿದ ಬೆನ್ನಲ್ಲೆ ರಾಜ್ಯದಲ್ಲಿ ಲವ್ ಜಿಹಾದ್ ತಡೆಯಲು ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರಲಾಗುವುದು ಎಂಬ ಹೇಳಿಕೆ ಕೊಡುವುದರೊಂದಿಗೆ ತಮಗೆ ವಹಿಸಿರುವ ಹೊಸ ಜವಾಬ್ದಾರಿಯ ನಿರ್ವಹಣೆಯನ್ನು ಆರಂಭಿಸಿದ್ದಾರೆ. ಸಿ.ಟಿ ರವಿ ಹೇಳಿಕೆ ಈ ರಾಜ್ಯದ ಗೃಹಮಂತ್ರಿ ಬಸವರಾಜು ಬೊಮ್ಮಾಯಿ ಅವರು ಅನುಮೋದಿಸಿದ್ದಾರೆ. ಬಿಜೆಪಿ ರಾಜ್ಯ ಕಾರ್ಯಕಾರಿಣಿಯೂ ಇದನ್ನು ಚರ್ಚೆ ಮಾಡಿದೆ. ಇದು ಮೇಲ್ನೋಟಕ್ಕೆ ಹಿಂದೂ ಹೆಣ್ಣು ಮಕ್ಕಳನ್ನು ರಕ್ಷಿಸಿಕೊಳ್ಳುವ ಕಾಳಜಿಯ ಕ್ರಮಗಳು ಎನ್ನುವಂತಿದ್ದರೂ, ಮತಾಂತರ ಕಾಯ್ದೆ ಜಾರಿ ಒತ್ತಾಯದ ಹಿಂದೆ ಯಡಿಯೂರಪ್ಪ ಅವರನ್ನು ಇಕ್ಕಟ್ಟಿಗೆ ಸಿಲುಕಿಸುವ ಕುತಂತ್ರವೂ ಅಡಗಿರುವುದು ಸುಳ್ಳಲ್ಲ. ಯಡಿಯೂರಪ್ಪ ಬಿಜೆಪಿಯಲ್ಲಿದ್ದರೂ ಕೋಮುವಾದಿಯಾಗಿ ನಡೆದುಕೊಂಡ ಉದಾಹರಣೆಗಳು ಕಡಿಮೆಯೇ. ರೈತರು, ಜನಪರ ಹೋರಾಟಗಳಿಂದ ಬೆಳದ ಯಡಿಯೂರಪ್ಪ ಮುಖ್ಯಮಂತ್ರಿಯಾಗಿನಿಂದಲೂ ರಾಜ್ಯದಲ್ಲಿ ಕೋಮು ಗಲಭೆಗಳಿಗೆ ಅವಕಾಶ ಕೊಡದಂತೆ ಎಚ್ಚರ ವಹಿಸಿದ್ದಾರೆ. (ಡಿ.ಜೆ.ಹಳ್ಳಿಯಲ್ಲಿ ನಡೆದದ್ದು ಕೋಮು ಗಲಭೆಯಲ್ಲ, ಅದು ಆಕ್ರೋಶಿತ ಜನರು ನಡೆಸಿದ ದಾಂಧಲೆ) ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಕುರ್ಚಿಯಿಂದ ಕೆಳಗಿಳಿಸಲು ಬಿಜೆಪಿಯಲ್ಲೇ ಗುಂಪೊಂದು ಶತಗತಾಯ ಪ್ರಯತ್ನಗಳನ್ನು ಈ ಕ್ಷಣಕ್ಕೂ ಮುಂದುವರೆಸಿದೆ. ಕೊರೋನ ಸೋಂಕನ್ನು ತಬ್ಲಿಘಿಗಳ ತಲೆಗೆ ಕಟ್ಟಿ ಆ ಮೂಲಕ ಅಲ್ಪಸಂಖ್ಯಾತರ ವಿರುದ್ಧ ಹಿಂದೂಗಳನ್ನು ಎತ್ತಿಕಟ್ಟುವ ಪ್ರಯತ್ನ ಮಾಡಿದ ಬಿಜೆಪಿ ಮತ್ತದರ ಕಾಲಾಳು ಹಿಂದೂ ಸಂಘಟನೆಗಳ ಉದ್ದೇಶವನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಒಂದೇ ಏಟಿಗೆ ಮಗ್ಗಲು ಮಲಗಿಸಿದರು. ಕೊರೋನ ಕಾಲದಲ್ಲಿ ಮಹಾರಾಷ್ಟ್ರದಲ್ಲಿ ಸಿಕ್ಕಿಬಿದ್ದಿದ್ದ ತಮ್ಮ ಶಿಕಾರಿಪುರ ಕ್ಷೇತ್ರದ ಹತ್ತಾರು ಅಲ್ಪಸಂಖ್ಯಾತ ತಬ್ಲಿಘಿಗಳನ್ನು ಸುರಕ್ಷಿತವಾಗಿ ಕರೆಯಿಸಿಕೊಂಡು ತಮ್ಮ ಪಾಲಿನ ಕರ್ತವ್ಯ ಮೆರೆದರು. ಅಲ್ಪಸಂಖ್ಯಾತರಿಗೆ ತೊಂದರೆಯಾದರೆ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಬಹಿರಂಗವಾಗಿಯೇ ಎಚ್ಚರಿಕೆ ನೀಡುವ ಮೂಲಕ ಯಡಿಯೂರಪ್ಪ ತಮ್ಮದೇ ಪಕ್ಷದ, ಸಂಘಪರಿವಾರದ ನಾಯಕರ ಕೆಂಗಣ್ಣಿಗೆ ಗುರಿಯಾದರು. ಅನೇಕ ಸಂದರ್ಭಗಳಲ್ಲಿ ರಾಜ್ಯದಲ್ಲಿ ಕೋಮುಗಲಭೆ ಸಷ್ಟಿಸಿ ಅದನ್ನು ಯಡಿಯೂರಪ್ಪ ಅವರ ತಲೆಗೆ ಕಟ್ಟಿ ಅವರನ್ನು ಪದಚ್ಯುತಿಗೊಳಿಸಬೇಕೆಂಬ ಷಡ್ಯಂತ್ರಗಳು ವಿಫಲವಾಗುತ್ತಲೆ ಬಂದಿವೆ. ಇದನ್ನು ಆರು ತಿಂಗಳ ಹಿಂದೆಯೇ ರಾಜ್ಯ ಗುಪ್ತದಳ ಮಾಹಿತಿ ನೀಡಿತ್ತು ಎನ್ನಲಾಗಿದೆ.

ಕರ್ನಾಟಕವನ್ನು ಮತ್ತೊಂದು ಉತ್ತರ ಪ್ರದೇಶವನ್ನಾಗಿಸುವ ಮತಾಂಧರು ಯಡಿಯೂರಪ್ಪ ಅವರ ವಿರುದ್ಧವೇ ಆಟ ಹೂಡಿದ್ದಾರೆ. ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೊಳಿಸುವ ಮೂಲಕ ಯಡಿಯೂರಪ್ಪ ಅವರನ್ನು ಅಲ್ಪಸಂಖ್ಯಾತರ ಪಾಲಿಗೆ ಖಳನಾಯಕನನ್ನಾಗಿಸಿಬಿಟ್ಟರೆ ರಾಜ್ಯದ ನೆಮ್ಮದಿಗೆ ಬೆಂಕಿ ಬೀಳುತ್ತದೆ. ಆಗ ಯಡಿಯೂರಪ್ಪ ಅವರನ್ನು ಸಲೀಸಾಗಿ ಕಿತ್ತು ಎಸೆದುಬಿಡಬೇಕೆಂಬ ಅಜೆಂಡಾವೊಂದು ಸಿದ್ಧಗೊಂಡಿದೆ. ಅದರ ಭಾಗವೇ ಮತಾಂತರ ನಿಷೇಧ ಕಾಯ್ದೆ ಜಾರಿ ಪ್ರೇತ ಕೂಗು. ಯಡಿಯೂರಪ್ಪನವರು ಎಚ್ಚರವಿರಬೇಕಷ್ಟೆ.



Join Whatsapp