ಬೆಂಗಳೂರು: ಡ್ರಗ್ಸ್ ಮಾರಾಟ ಸರಬರಾಜು ವಿರುದ್ಧದ ಕಾರ್ಯಾಚರಣೆ ತೀವ್ರಗೊಳಿಸಿರುವ ಸಿಸಿಬಿ ಪೊಲೀಸರು, ಒಣ ಹಣ್ಣುಗಳು, ಕುರುಕು ತಿಂಡಿ ಪೊಟ್ಟಣಗಳಲ್ಲಿ ಗಾಂಜಾ ತಂದು ಮಾರಾಟ ಮಾಡುತ್ತಿದ್ದ ಒಡಿಶಾ ಮೂಲದ ಆರೋಪಿಯನ್ನು ಬಂಧಿಸಿದ್ದಾರೆ.
ಬಂಧಿತ ಒಡಿಶಾ ಮೂಲದ ಆರೋಪಿಯಿಂದ ಲಕ್ಷ 8 ಲಕ್ಷ ಬೆಲೆಯ 7 ಕೆಜಿ ಗಾಂಜಾ ಹಾಗೂ 65 ಸಾವಿರ ನಗದನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ ರಮಣ್ ಗುಪ್ತ ತಿಳಿಸಿದ್ದಾರೆ.
ಆರೋಪಿಯು ಒರಿಸ್ಸಾ ರಾಜ್ಯದ ಭದ್ರಾಕ್ ಜಿಲ್ಲೆಯಿಂದ ಮಾದಕ ವಸ್ತುಗಳನ್ನು ಒಣ ಹಣ್ಣುಗಳು ಕುರುಕು ತಿಂಡಿ ಪೊಟ್ಟಣಗಳಲ್ಲಿ ತುಂಬಿ ಸೆಲೋಟೇಪ್ ನಿಂದ ವಾಸನೆ ಬಾರದಂತೆ ಕಟ್ಟಿಕೊಂಡು ರೈಲಿನಲ್ಲಿ ಸಾಗಿಸಿಕೊಂಡು ಬರುತ್ತಿದ್ದ.
ನಗರದ ಮೈಕೋ ಲೇಔಟ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಯಾರಿಗೂ ಅನುಮಾನ ಬಾರದಂತೆ ಸಂಚರಿಸಿ ಸಾಫ್ಟ್ವೇರ್ ಉದ್ಯೋಗಿಗಳು, ಪ್ರತಿಷ್ಠಿತ ಕಾಲೇಜು ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ.
ಗಾಂಜಾ ಖರೀದಿಸುತ್ತಿದ್ದ ಖದೀಮನೊಬ್ಬ ನೀಡಿದ ಮಾಹಿತಿಯನ್ನು ಆಧರಿಸಿ ಕಾರ್ಯಾಚರಣೆ ಕೈಗೊಂಡು ಆರೋಪಿಯನ್ನು ಬಂಧಿಸಲಾಗಿದೆ.
ಆರೋಪಿಯ ವಿರುದ್ಧ ಮೈಕೋ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದರು.