ನವೀನ್ ಪಾರ್ಥಿವ ಶರೀರವನ್ನು ತಾಯ್ನಾಡಿಗೆ ತರಲು ಕೇಂದ್ರ ಸರ್ಕಾರ ಸ್ಪಂದಿಸುತ್ತಿಲ್ಲ: ಸಿದ್ಧರಾಮಯ್ಯ ಆರೋಪ

Prasthutha|

ಬೆಂಗಳೂರು: ಹಾವೇರಿ ಮೂಲದ ನವೀನ್ ಶೇಖರಪ್ಪ ಗ್ಯಾನ್ ಗೌಡರ್ ಅವರ ಪಾರ್ಥಿವ ಶರೀರವನ್ನು ಖಾಸಗಿ ವಿಮಾನದ ಮೂಲಕ ವಾಪಸ್ ಕರೆತರುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಸೂಕ್ತವಾಗಿ ಸ್ಪಂದಿಸುತ್ತಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.

- Advertisement -

ಇತ್ತೀಚೆಗೆ ರಷ್ಯಾದ ಶೆಲ್ ದಾಳಿಗೊಳಗಾಗಿ ಉಕ್ರೇನ್ ನಲ್ಲಿ ಮೃತಪಟ್ಟ ಹಾವೇರಿ ಜಿಲ್ಲೆಯ ರಾಣಿಬೆನ್ನೂರು ಸಮೀಪದ ಚಳಗೇರಿ ನಿವಾಸಿಯಾದ ನವೀನ್ ಅವರ ಕುಟುಂಬದ ಸದಸ್ಯರನ್ನು ಭೇಟಿ ಮಾಡಿ ಸಾಂತ್ವನ ನೀಡಿದ ಬಳಿಕ ಮಾತನಾಡಿದ ಸಿದ್ದರಾಮಯ್ಯ, ಖಾಸಗಿ ವಿಮಾನದ ಮೂಲಕ ಪಾರ್ಥಿವ ಶರೀರವನ್ನು ತಾಯ್ನಾಡಿಗೆ ಕರೆ ತರಲು ಅನುಮತಿ ಕೋರಿ ಎಂ.ಬಿ. ಕೋಳಿವಾಡ್ ಪುತ್ರ ಬರೆದ ಪತ್ರಕ್ಕೆ ಕೇಂದ್ರ ಸರ್ಕಾರ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲ ಎಂದು ಕಿಡಿ ಕಾರಿದ್ದಾರೆ.

ನವೀನ್ ಎಂಬಾತನ ಹೆತ್ತವರು ಮಗ ವೈದ್ಯನಾಗಬೇಕೆಂದು ಬೃಹತ್ ಕನಸನ್ನು ಹೊತ್ತುಕೊಂಡಿದ್ದರು. ಆದರೆ ಈಗ ಆತನ ಸಾವಿನೊಂದಿಗೆ ಅದು ನೆಲಕಚ್ಚಿದೆ ಎಂದು ವಿಷಾದಿಸಿದ್ದಾರೆ.

- Advertisement -

ನವೀನ್ ಎಂಬ ಯುವ ಪ್ರತಿಭೆಯ ಸಾವಿನಿಂದಾಗಿ ಆತನ ಪೋಷಕರು ದಿನವೂ ಕಣ್ಣೀರು ಸುರಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ನವೀನ್ ಅವರ ಪಾರ್ಥಿವ ಶರೀರವನ್ನು ತಾಯ್ನಾಡಿಗೆ ಮರಳಿ ತರುವುದು ಕೇಂದ್ರ ಸರ್ಕಾರ ಜವಾಬ್ದಾರಿಯಾಗಿದೆ ಎಂದು ತಿಳಿಸಿದ್ದಾರೆ.

ಇದಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯುವುದಾಗಿ ತಿಳಿಸಿದ್ದಾರೆ.

ಈ ನಡುವೆ ಮಂಗಳವಾರ ನವೀನನ ಕುಟುಂಬವನ್ನು ಭೇಟಿ ಮಾಡಿದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಅಧಿಕಾರಿಗಳು ಪಾರ್ಥಿವ ಶರೀರವನ್ನು ಹೊರತೆಗೆದಿದ್ದು, ತಾಯ್ನಾಡಿಗೆ ತರುವ ನಿಟ್ಟಿನಲ್ಲಿ ವಿದೇಶಾಂಗ ಸಚಿವ ಎಸ್. ಜಯಶಂಕರ್ ಅವರೊಂದಿಗೆ ಸಮಾಲೋಚನೆ ನಡೆಸಿದ್ದೇನೆ. ಸದ್ಯ ಈ ಪ್ರದೇಶದಲ್ಲಿ ಭಾರೀ ಶೆಲ್ ದಾಳಿ ನಡೆಯುತ್ತಿರುವುದರಿಂದ ಅತೀ ಶೀಘ್ರದಲ್ಲಿ ನವೀನದ ಪಾರ್ಥಿವ ಶರೀರವನ್ನು ಭಾರತಕ್ಕೆ ತರಲು ಪ್ರಯತ್ನಿಸಲಾಗುವುದೆಂದು ಭರವಸೆ ನೀಡಿದ್ದರು.



Join Whatsapp