ಬೇಜವಾಬ್ದಾರಿಯಿಂದ ನಡೆಯುತ್ತಿರುವ ಬಿಜೆಪಿ ಕೈಯಲ್ಲಿ ರಾಜ್ಯ, ದೇಶ ಉಳಿಯುತ್ತಾ?: ಸಿದ್ದರಾಮಯ್ಯ

Prasthutha|

ಹಾವೇರಿ: ರಷ್ಯಾ-ಯುಕ್ರೇನ್ ಯುದ್ಧ ನಡೆಯುವ ಬಗ್ಗೆ ವಿದೇಶಾಂಗ ಕಚೇರಿಗೆ ಮಾಹಿತಿಯಿದ್ದು ಯುದ್ಧ ಪ್ರಾರಂಭವಾಗುವ ಮೊದಲೇ ಮುಂಜಾಗ್ರತಾ ಕ್ರಮವನ್ನು ಕೈಗೊಂಡು ಅಲ್ಲಿರುವ ಭಾರತೀಯರನ್ನು ತವರಿಗೆ ಕರೆತರಬೇಕಿತ್ತು. ಈ ವಿಷಯದಲ್ಲಿ ಕೇಂದ್ರ ಸರ್ಕಾರ ಬೇಜವಾಬ್ದಾರಿಯುತವಾಗಿ ನಡೆದುಕೊಂಡಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

- Advertisement -

ರಾಣೆಬೆನ್ನೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ‘ರಷ್ಯಾ -ಉಕ್ರೇನ್ ನಡುವೆ ಯುದ್ಧ ನಡೆಯುತ್ತಿದೆ. ಭಾರತದ ಹೆಚ್ಚಿನ ವಿದ್ಯಾರ್ಥಿಗಳು ಉಕ್ರೇನ್ ನಲ್ಲಿ ಮೆಡಿಕಲ್ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಭಾರತದಲ್ಲಿ ಮೆಡಿಕಲ್ ಸೀಟು ಸಿಗದ ಕಾರಣ ಹೊರದೇಶಕ್ಕೆ ಹೋಗಬೇಕಾಯಿತು. ಬೇರೆ ದೇಶದ ಬಹುತೇಕ ಜನರು ಅವರವರ ದೇಶಕ್ಕೆ ಮರಳಿ ಹೋಗಿದ್ದು, ಭಾರತೀಯರೇ ಹೆಚ್ಚು ಜನ ಅಲ್ಲಿ ಯುದ್ಧದ ಮಧ್ಯೆ ಸಿಕ್ಕಿಬಿದ್ದಿದ್ದಾರೆ ಎಂದು ಹೇಳಿದರು.

ಮಾರ್ಚ್ ಒಂದರಂದು ದಾಳಿಗೆ ಬಲಿಯಾಗಿದ್ದರೂ ಈ ವರೆಗೆ ನವೀನ್ ಮೃತದೇಹವನ್ನು ಕುಟುಂಬದವರಿಗೆ ನೀಡಿಲ್ಲ. ಇಂತಹ ಸಂದರ್ಭದಲ್ಲಿ ವಿದೇಶಾಂಗ ಸಚಿವಾಲಯ ಪಾದರಸದಂತೆ ಕೆಲಸ ಮಾಡಬೇಕು. ಪ್ರಹ್ಲಾದ್ ಜೋಶಿ ಕೇಂದ್ರ ಸಚಿವರಾಗಿದ್ದುಕೊಂಡು ಬೇಜವಾಬ್ದಾರಿ ಹೇಳಿಕೆ ನೀಡುವುದನ್ನು ನಿಲ್ಲಿಸಿ, ಕೂಡಲೇ ನವೀನ್ ಅವರ ಮೃತದೇಹವನ್ನು ಭಾರತಕ್ಕೆ ತರಿಸುವ ಕೆಲಸ ಮಾಡಬೇಕು ಎಂದು ಒತ್ತಾಯಿಸಿದರು.

- Advertisement -

ಮನಮೋಹನ್ ಸಿಂಗ್ ಅವರ ಸರ್ಕಾರದ ಕೊನೆಯಲ್ಲಿ ಇದ್ದ ದೇಶದ ಒಟ್ಟು ಸಾಲ ರೂ. 53 ಲಕ್ಷ ಕೋಟಿ, ಬಿಜೆಪಿ ಅಧಿಕಾರಕ್ಕೆ ಬಂದ ಎಂಟು ವರ್ಷದಲ್ಲಿ ಈ ಸಾಲ ರೂ. 152 ಲಕ್ಷ ಕೋಟಿಗೆ ಹೆಚ್ಚಾಗಿದೆ. ಬಿಜೆಪಿಯವರ ಕೈಯಲ್ಲಿ ರಾಜ್ಯ ಮತ್ತು ದೇಶ ಉಳಿಯುತ್ತಾ? ಕೇಂದ್ರ ಬಿಜೆಪಿ ಸ್ವದೇಶಿ ಉತ್ಪಾದನೆ ಮಾಡುತ್ತೇವೆ ಎಂದು ಹೇಳಿ ಸುಳ್ಳುಗಳ ಉತ್ಪಾದನೆ ಮಾಡುತ್ತಿದೆ. ಬಿಜೆಪಿಯವರದು ಹೇಡಿ ಸರ್ಕಾರ. ಮೋದಿ ಅವರ ಎದುರು ನಿಂತು ಮಾತನಾಡುವ ಧೈರ್ಯ ರಾಜ್ಯ ಬಿಜೆಪಿ ಸರ್ಕಾರಕ್ಕಾಗಲೀ, ಬಿಜೆಪಿ ಸಂಸದರಿಗಾಗಲೀ ಇಲ್ಲ ಎಂದು ಟೀಕಿಸಿದರು.

ಮಹಾತ್ಮ ಗಾಂಧಿ ಅವರು ದಂಡಿಯಾತ್ರೆ ಮಾಡಿದ್ದು ದೇಶದ ಸ್ವಾತಂತ್ರ್ಯಕ್ಕಾಗಿ, ಈಗ ನಾವು ಪಾದಯಾತ್ರೆ ಮಾಡಿರುವುದು ಬೆಂಗಳೂರು ನಗರಕ್ಕೆ ಕುಡಿಯುವ ನೀರಿಗಾಗಿ.ಇದರಿಂದ ಹತಾಶರಾಗಿ ಬಿಜೆಪಿಯವರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ಹೇಳಿದರು.



Join Whatsapp