ಹಿಂದಿ ಹೇರಿಕೆ ವಿರುದ್ಧ ಸಿಡಿದೆದ್ದ ದಕ್ಷಿಣ ಭಾರತ : #Kannada ಟ್ರೆಂಡಿಂಗ್

Prasthutha|

ಬೆಂಗಳೂರು : ಹಿಂದಿ ವಿಷಯವಾಗಿ ಅವಮಾನ ಎದುರಿಸಿದುದರ ವಿರುದ್ಧ ಡಿಎಂಕೆ ಸಂಸದೆ ಕನಿಮೋಳಿ ಧ್ವನಿ ಎತ್ತಿದ ಬೆನ್ನಲ್ಲೇ, ಕರ್ನಾಟಕದಲ್ಲೂ ಹಿಂದಿ ಹೇರಿಕೆ ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಈ ಕುರಿತು ಟ್ವಿಟರ್ ನಲ್ಲಿ ಕನ್ನಡ ಹ್ಯಾಶ್ ಟ್ಯಾಗ್ ಟ್ರೆಂಡಿಂಗ್ ಆಗಿದೆ.

- Advertisement -

ಕನಿಮೋಳಿ ತಮಗೆ ಹಿಂದಿ ವಿಷಯದಲ್ಲಾದ ಅವಮಾನದ ಕುರಿತು ಧ್ವನಿ ಎತ್ತುತ್ತಿದ್ದಂತೆ, ದಕ್ಷಿಣ ಭಾರತದಲ್ಲಿ ಹಿಂದಿ ಹೇರಿಕೆಯನ್ನು ವಿರೋಧಿಸಿ ಟ್ವಿಟರ್ ಬಳಕೆದಾರರು #hindiimposition ಹ್ಯಾಶ್ ಟ್ಯಾಗ್ ನಡಿ ಟ್ವೀಟ್ ಮಾಡಲಾರಂಭಿಸಿದರು. ಕನಿಮೋಳಿ ಅಭಿಪ್ರಾಯವನ್ನು ಬೆಂಬಲಿಸಿದ ದಕ್ಷಿಣ ಭಾರತೀಯರ ಈ ಹ್ಯಾಶ್ ಟ್ಯಾಗ್ ಟ್ರೆಂಡಿಂಗ್ ಆಯಿತು.

ಈ ನಡುವೆ ನೈರುತ್ಯ ರೈಲ್ವೆ ಬೆಂಗಳೂರು ಕೆಎಸ್ಆರ್ (ಕಂಠೀರವ ಸಂಗೊಳ್ಳಿ ರಾಯಣ್ಣ) ರೈಲು ನಿಲ್ದಾಣದಲ್ಲಿ ಕಿಯೋಸ್ಕ್ ಸ್ಥಾಪಿಸಿದ ಬಗ್ಗೆ ಆ.7ರಂದು ಟ್ವೀಟ್ ಮಾಡಿತ್ತು. ಅಲ್ಲಿ ಸ್ಥಾಪಿಸಿದ ಕಿಯೋಸ್ಕ್ ನಲ್ಲಿ ಹಿಂದಿ, ಇಂಗ್ಲಿಷ್ ಸೂಚನೆಗಳಿರುವುದನ್ನು ಪ್ರಶ್ನಿಸಿದ ಒಬ್ಬ ಟ್ವೀಟಿಗ, ದಕ್ಷಿಣ ಭಾರತದಲ್ಲಿ ಹಿಂದಿ ಯಾಕೆ ಎಂದು ಪ್ರಶ್ನಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಬೆಂಗಳೂರಿನ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅಶೋಕ್ ಕುಮಾರ್ ವರ್ಮಾ ಅವರ DRM Bengaluru (@drmsbc) ಟ್ವಿಟರ್ ಖಾತೆ, ಯಾಕೆಂದರೆ ಇದು ಭಾರತ ಎಂದು ಉತ್ತರಿಸಿತ್ತು.

- Advertisement -

ಡಿಎಂಆರ್ ಟ್ವೀಟ್ ಗೆ ಪ್ರತಿಕ್ರಿಯಿಸಿದ ವಿನಾಯಕ್ ತೇಳಿ (@VINAYAKTELI) ಎಂಬ ಟ್ವೀಟಿಗ, ನಾವು ಏನು ಕೇಳುತ್ತಿದ್ದೇವೆ ಎಂಬುದು ನಿಮಗೆ ಗೊತ್ತಾ? ನೀವು ಹಿಂದಿಯನ್ನು ರಾಷ್ಟ್ರೀಯತೆ ಜೊತೆ ತಳುಕು ಹಾಕುತ್ತಿದ್ದೀರಿ, ನನ್ನ ಮಾತೃಭಾಷೆಯಲ್ಲಿ ಮಾಹಿತಿ ಕೇಳುವ ಹಕ್ಕು ನನಗಿದೆ ಎಂದು ಟ್ವೀಟಿಸಿದ್ದಾರೆ. ಈ ಟ್ವೀಟ್ ಗೆ ಮರು ಉತ್ತರಿಸಿದ ಡಿಆರ್ ಎಂ ಬೆಂಗಳೂರು, “ಪ್ರಧಾನ ಮಾಹಿತಿಗಳು ಸ್ಥಳೀಯ ಭಾಷೆಯಲ್ಲಿಯೇ ಲಭ್ಯವಾಗುವಂತೆ ಮಾಡಲು ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡುತ್ತೇವೆ. ಹೊರಗಿನ ಏಜೆನ್ಸಿಯೊಂದು ದೇಣಿಗೆ ನೀಡಿದ ವಸ್ತುವಿನಲ್ಲಿ ಚಿಕ್ಕದೊಂದು ಸ್ಟಿಕ್ಕರ್ ಇದ್ದರೂ ಭಾಷೆಯ ಸಮಸ್ಯೆ ಎಂದು ಕೂಗುವುದು ಸರಿಯಲ್ಲ. ಶ್ರಮವನ್ನು ಶ್ಲಾಘಿಸುವ ಬದಲು ಎಲ್ಲ ಸಮಯ ನೀವು ಹಿಂದಿ ವಿರೋಧಿ ನಿಲುವು ವ್ಯಕ್ತಪಡಿಸುತ್ತಿದ್ದೀರಿ” ಎಂದು ಟ್ವೀಟಿಸಿದೆ.

ಡಿಎಂಆರ್ ಬೆಂಗಳೂರು ಮಾಡಿರುವ ಈ ಟ್ವೀಟ್ ಗೆ ಕೆರಳಿದ ಕನ್ನಡಿಗರು, ಟ್ವಿಟರ್ ನಲ್ಲಿ #Kannada ಹ್ಯಾಶ್ ಟ್ಯಾಗ್ ನಡಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಹೀಗಾಗಿ #Kannada ಹ್ಯಾಶ್ ಟ್ಯಾಗ್ ಟ್ವಿಟರ್ ನಲ್ಲಿ ಟ್ರೆಂಡಿಂಗ್ ಆಗಿ, ಏಕ ಕಾಲಕ್ಕೆ ಹಿಂದಿ ಹೇರಿಕೆ ವಿರುದ್ಧ ದಕ್ಷಿಣ ಭಾರತದಲ್ಲಿ ಆಕ್ರೋಶ ವ್ಯಕ್ತವಾಯಿತು.



Join Whatsapp