ಮಾನವ ಗುರಾಣಿ ಘಟನೆ: ವರದಿ ಸಲ್ಲಿಸಲು ವಿಫಲರಾದ ತನಿಖಾಧಿಕಾರಿ ವಿರುದ್ಧ ವಾರೆಂಟ್ ಹೊರಡಿಸಿದ ಕಾಶ್ಮೀರ ಹೈಕೋರ್ಟ್

Prasthutha|

ಕಾಶ್ಮೀರ: ಸೇನಾ ಬೆಂಗಾವಲು ಪಡೆಯ ಮೇಲೆ ಕಲ್ಲು ತೂರಾಟ ನಡೆಯುವುದನ್ನು ತಡೆಯಲು ಭಾರತೀಯ ಸೇನೆಯ ಜೀಪ್ ಮುಂಭಾಗಕ್ಕೆ ನಾಗರಿಕರೊಬ್ಬರನ್ನು ಗುರಾಣಿಯಂತೆ ಕಟ್ಟಿದ ಘಟನೆಯ ಸ್ಥಿತಿಗತಿ ವರದಿ ಸಲ್ಲಿಸಲು ವಿಫಲಾರದ ತನಿಖಾಧಿಕಾರಿ ವಿರುದ್ಧ ಜಮ್ಮು ಕಾಶ್ಮೀರ ಮತ್ತು ಲಡಾಖ್ ಹೈಕೋರ್ಟ್ ಜಾಮೀನು ಸಹಿತ ವಾರೆಂಟ್ ಹೊರಡಿಸಿದೆ.

- Advertisement -

ತನಿಖೆಯ ಪ್ರಗತಿ ಕುರಿತು ವರದಿ ಸಲ್ಲಿಸಬೇಕು ತಪ್ಪಿದಲ್ಲಿ ನ್ಯಾಯಾಲಯಕ್ಕೆ ಖುದ್ದು ಹಾಜರಾಗಬೇಕಾಗುತ್ತದೆ ಎಂದು ನವೆಂಬರ್ 29, 2021 ರಂದು ನೀಡಿದ್ದ ಆದೇಶವನ್ನು ನ್ಯಾಯಾಲಯದ ಗಮನಕ್ಕೆ ತರಲಾಯಿತು. ಆದರೆ ಫೆಬ್ರವರಿ 17, 2022ರಂದು ಪ್ರಕರಣದ ವಿಚಾರಣೆ ನಡೆದಾಗ ಪ್ರತಿವಾದಿಗಳ ಪರ ವಕೀಲರು ಹಾಗೂ ತನಿಖಾಧಿಕಾರಿ ಇಬ್ಬರೂ ಹಾಜರಿರಲಿಲ್ಲ. ಹೀಗಾಗಿ ನ್ಯಾಯಾಲಯ ಸಂಬಂಧಪಟ್ಟ ತನಿಖಾಧಿಕಾರಿಗೆ 20,000 ಮೊತ್ತದ ಜಾಮೀನು ನೀಡಬಹುದಾದ ವಾರಂಟ್‌ ಹೊರಡಿಸಿತು.

2017ರ ಶ್ರೀನಗರ ಲೋಕಸಭಾ ಉಪಚುನಾವಣೆಯಲ್ಲಿ ಸೇನಾ ಬೆಂಗಾವಲು ಪಡೆಯ ಮೇಲೆ ಪ್ರತಿಭಟನಕಾರರಿಂದ ನಡೆಯುತ್ತಿದ್ದ ಕಲ್ಲು ತೂರಾಟ ತಡೆಯಲು ಭಾರತೀಯ ಸೇನೆ ಅರ್ಜಿದಾರ ಫಾರೂಕ್ ಅಹ್ಮದ್ ದಾರ್ ಅವರನ್ನು ಮಿಲಿಟರಿ ಜೀಪಿನ ಬಾನೆಟ್ಗೆ ಕಟ್ಟಿತ್ತು. ಘಟನೆಯ ಸಂದರ್ಭದಲ್ಲಿ ಮೇಜರ್ ಲೀತುಲ್ ಗೊಗೊಯ್ ಸೇನಾ ತುಕಡಿಯ ಉಸ್ತುವಾರಿ ವಹಿಸಿದ್ದರು. ಘಟನೆಗೆ ಸಂಬಂಧಿಸಿದಂತೆ ತೀವ್ರ ಆಕ್ರೋಶ ವ್ಯಕ್ತವಾದ ನಂತರ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಸೇನಾ ಅಧಿಕಾರಿ ಮೇಜರ್ ಗೊಗೊಯ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿತ್ತು. ಇತ್ತ ಪ್ರಕರಣದ ವಿಚಾರಣೆ ನಡೆಸಿದ ರಾಜ್ಯ ಮಾನವ ಹಕ್ಕುಗಳ ಆಯೋಗ ದಾರ್ ಅವರಿಗೆ 10 ಲಕ್ಷ ಪರಿಹಾರ ನೀಡಿತು.

- Advertisement -

ಆದರೆ ಹಣ ಪಾವತಿಸಲು ಯಾವುದೇ ನಿಯಮಗಳಿಲ್ಲ ಎಂದು ಹೇಳಿ ಆಗಿನ ಪಿಡಿಪಿ-ಬಿಜೆಪಿ ಸರ್ಕಾರ ಈ ಪರಿಹಾರವನ್ನು ತಿರಸ್ಕರಿಸಿತ್ತು. ನಂತರ ದಾರ್ ಅವರು ಪ್ರಕರಣದ ತನಿಖೆ ಮತ್ತು ಆರೋಪಪಟ್ಟಿ ಸಲ್ಲಿಸಲು ನಿರ್ದೇಶನಗಳನ್ನು ಕೋರಿ ಹೈಕೋರ್ಟ್‌ ಮೊರೆ ಹೋಗಿದ್ದರು. ಪ್ರಕರಣದ ಮುಂದಿನ ವಿಚಾರಣೆ 9 ಮೇ, 2022ರಂದು ನಡೆಯಲಿದೆ.

(ಕೃಪೆ: ಬಾರ್ & ಬೆಂಚ್)



Join Whatsapp