ವಾಷಿಂಗ್ಟನ್: ಒಂದು ವೇಳೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ರಷ್ಯಾ ವಿರುದ್ಧದ ಸಂಘರ್ಷದಲ್ಲಿ ಮೃತಪಟ್ಟರೂ, ಉಕ್ರೇನ್ ಸರ್ಕಾರ ಮುಂದುವರಿಯುವುದಕ್ಕೆ ಬೇಕಾದ ಯೋಜನೆಗಳು ಸಿದ್ಧವಾಗಿವೆ ಎಂದು ಅಮೆರಿಕದ ವಿದೇಶಾಂಗ ಸಚಿವ ಆ್ಯಂಟೊನಿ ಬ್ಲಿಂಕೆನ್ ಹೇಳಿದ್ದಾರೆ.
ಝೆಲೆನ್ಸ್ಕಿ ಅವರನ್ನು ಹತ್ಯೆ ಮಾಡುವ ಆದೇಶದ ಮೇರೆಗೆ ರಷ್ಯಾದ ನೂರಾರು ಸೈನಿಕರು ಕೀವ್ ನಲ್ಲಿ ಕಾರ್ಯಾಚರಿಸುತ್ತಿದ್ದಾರೆ ಎಂದು ಉಕ್ರೇನ್ ಆರೋಪಿಸಿದೆ. ತಮ್ಮ ಮೇಲೆ ದಾಳಿ ನಡೆಸುವಂತೆ ರಷ್ಯಾ ತನ್ನ ಸೈನಿಕರಿಗೆ ಆದೇಶಿಸಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಆರೋಪಿಸಿದ್ದರು.
ಝೆಲೆನ್ಸ್ಕಿ ಅವರು ಹತ್ಯೆ ಯತ್ನದಿಂದ ಅಲ್ಪದರಲ್ಲೇ ಪಾರಾಗಿದ್ದಾರೆ ಎಂದು ಉಕ್ರೇನ್ ಅಧಿಕಾರಿಗಳು ಕಳೆದವಾರ ಹೇಳಿದ್ದರು.
ಝೆಲೆನ್ಸ್ಕಿ ಹತ್ಯೆ ಭೀತಿಯ ಕುರಿತು ಮಾತನಾಡಿರುವ ಬ್ಲಿಂಕೆನ್, ‘ಉಕ್ರೇನ್ ಸರ್ಕಾರದ ನಾಯಕತ್ವವು ಅಸಾಮಾನ್ಯವಾದದ್ದು. ನಾನು ಉಕ್ರೇನ್ ವಿದೇಶಾಂಗ ಸಚಿವರೊಂದಿಗೆ ಮಾತನಾಡಿದ್ದೇನೆ. ಸರ್ಕಾರವನ್ನು ಮುನ್ನಡೆಸುವುದಕ್ಕೆ ಅಗತ್ಯವಿರುವ ಎಲ್ಲ ಯೋಜನೆಗಳು ಸಿದ್ಧವಾಗಿರುವುದಾಗಿ ಅವರು ಹೇಳಿದ್ದಾರೆ’ ಎಂದು ತಿಳಿಸಿದ್ದಾರೆ.
ಫೆಬ್ರುವರಿ 24ರಂದು ಆರಂಭವಾದ ರಷ್ಯಾ, ಉಕ್ರೇನ್ ಸಂಘರ್ಷವು 12ನೇ ದಿನಕ್ಕೆ ಕಾಲಿಟ್ಟಿದೆ