ರಾಮಲ್ಲಾ: ಫೆಲೆಸ್ತೀನ್’ನಲ್ಲಿ ಭಾರತದ ರಾಯಭಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಮುಕುಲ್ ಆರ್ಯ ಅವರ ಮೃತದೇಹ ಭಾನುವಾರ ರಾಮಲ್ಲಾದಲ್ಲಿರುವ ಭಾರತೀಯ ರಾಯಭಾರಿ ಕಚೇರಿಯಲ್ಲಿ ಪತ್ತೆಯಾಗಿದೆ.
ಆರ್ಯ ರಾಯಭಾರ ಕಚೇರಿಯೊಳಗೆ ನಿಗೂಢವಾಗಿ ಶವವಾಗಿ ಪತ್ತೆಯಾಗಿದ್ದು, ಅವರ ಸಾವಿನ ಬಗ್ಗೆ ಫೆಲೆಸ್ತೀನ್ ಅಧಿಕಾರಿಗಳು ತನಿಖೆಗೆ ಆದೇಶಿಸಿದ್ದಾರೆ. ಆರ್ಯ ಅವರ ನಿಧನಕ್ಕೆ ವಿದೇಶಾಂಗ ಸಚಿವ ಎಸ್. ಜೈಶಂಕರ್ ಟ್ವೀಟ್ ಮಾಡಿದ್ದು, “ರಾಮಲ್ಲಾದಲ್ಲಿ ಭಾರತದ ಪ್ರತಿನಿಧಿಯಾದ ಮುಕುಲ್ ಆರ್ಯ ಅವರ ನಿಧನದ ಬಗ್ಗೆ ತಿಳಿದು ತೀವ್ರ ಆಘಾತವಾಗಿದೆ.
ಅವರು ಪ್ರತಿಭಾವಂತ ಅಧಿಕಾರಿಯಾಗಿದ್ದರು” ಎಂದು ಸಂತಾಪ ಸೂಚಿಸಿದ್ದಾರೆ. 2008ನೇ ಬ್ಯಾಚಿನ ಐಎಫ್ಎಸ್ ಅಧಿಕಾರಿಯಾಗಿದ್ದ ಆರ್ಯ ವಿದೇಶಾಂಗ ವ್ಯವಹಾರ ಸಚಿವಾಲಯದ ಅಧಿಕಾರಿಯಾಗಿ, ಯುನೆಸ್ಕೋ ಭಾರತ ನಿಯೋಗದ ಕಾಯಂ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು.