ಕಾಬೂಲ್: ಅಮೆರಿಕಾ ಹಿಡಿತದಿಂದ ತಾಲಿಬಾನ್ ಕೈವಶವಾದ ಹಲವು ತಿಂಗಳ ಬಳಿಕ ತಾಲಿಬಾನ್ ಗುಂಪಿನ ಸರ್ವೋಚ್ಛ ನಾಯಕ ಸಿರಾಜುದ್ದೀನ್ ಹಕ್ಕಾನಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಅಲ್ಲದೇ, ಹಕ್ಕಾನಿ ಭಾಗವಹಿಸಿದ ಫೋಟೋಗಳನ್ನು ತಾಲಿಬಾನ್ ಸರಕಾರದ ಅಧಿಕೃತ ಮಾಧ್ಯಮಗಳು ಪ್ರಕಟಿಸಿವೆ.
ಶನಿವಾರ ಅಫ್ಘಾನಿಸ್ತಾನದಲ್ಲಿ ನಡೆದ ಪೊಲೀಸ್ ಪಡೆಗಳ ಮೊದಲ ಬ್ಯಾಚ್ ನ ಬೀಳ್ಕೊಡುಗೆ ಸಮಾರಂಭದಲ್ಲಿ ಪ್ರಸಕ್ತ ತಾಲಿಬಾನ್ ಸರಕಾರದ ಉಸ್ತುವಾರಿ ಆಂತರಿಕ ಸಚಿವನಾಗಿರುವ ಸಿರಾಜುದ್ದೀನ್ ಹಕ್ಕಾನಿ ಬಿಗಿ ಭದ್ರತೆ ಮೂಲಕ ಭಾಗವಹಿಸಿದ್ದಾಗಿ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.
ಅಲ್ಲದೇ ಸಮಾರಂಭದಲ್ಲಿ ಮಾತನಾಡಿದ ಹಕ್ಕಾನಿ, ಈ ಹಿಂದೆ ತಾಲಿಬಾನ್ ಪಡೆಗಳಿಂದಾಗಿರುವ ಪ್ರಮಾದಗಳನ್ನು ಒಪ್ಪಿಕೊಂಡರಲ್ಲದೇ, ಅಂತರಾಷ್ಟ್ರೀಯ ಸಮುದಾಯವು ತಾಲಿಬಾನ್ ಸರಕಾರವನ್ನು ಬೆದರಿಕೆ ಅನ್ನೋ ದೃಷ್ಟಿಕೋನದಿಂದ ನೋಡದೆ ಅಫ್ಘಾನಿಸ್ತಾನ ದೇಶದ ಪುನರ್ ನಿರ್ಮಾಣಕ್ಕೆ ನೆರವು ನೀಡಬೇಕಿದೆ ಎಂದು ತಿಳಿಸಿದರು.
ಇನ್ನು ತಾಲಿಬಾನ್ ನಿಯಂತ್ರಿತ ಅಫ್ಘಾನಿಸ್ತಾನದಲ್ಲಿ ಮಹಿಳೆಯರು ಕೆಲಸ, ಶಾಲೆಗಳಿಗೆ ತೆರಳಬಹುದಾಗಿದೆ ಎಂದಿದ್ದಾರೆ.
ಮೊದಲ ಬ್ಯಾಚ್ ನ ಪೊಲೀಸ್ ಪಡೆಯಲ್ಲೂ ಮಹಿಳೆಯರು ಕಾಣಿಸಿಕೊಂಡಿದ್ದು, ಸುಮಾರು 377 ಮಂದಿ ತರಬೇತಿ ಮುಗಿಸಿಕೊಂಡಿದ್ದಾಗಿ ವರದಿಗಳು ತಿಳಿಸಿವೆ.