ಉಕ್ರೇನಿನಲ್ಲಿ ಪರಮಾಣು ದುರಂತದ ಆತಂಕ ವ್ಯಕ್ತಪಡಿಸಿದ UNSC

Prasthutha|

ವಾಷಿಂಗ್ಟನ್: ರಷ್ಯಾವು ಉಕ್ರೇನಿನ ಪರಮಾಣು ಸ್ಥಾವರವನ್ನು ವಶಪಡಿಸಿಕೊಂಡಿರುವುದು ಹಾಗೂ ಪರಮಾಣು ಶಸ್ತ್ರಾಸ್ತ್ರಗಳನ್ನು ಸಿದ್ಧವಾಗಿಡಲು ಆದೇಶಿಸಿರುವುದು ಜಾಗತಿಕ ಪರಮಾಣು ದುರಂತ ಘಟನೆಗೆ ಮುನ್ನುಡಿ ಆಗಬಹುದು ಎಂದು ಯುಎನ್ಎಸ್ ಸಿ- ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯು ಆತಂಕ ವ್ಯಕ್ತಪಡಿಸಿದೆ.

- Advertisement -

ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು ರಷ್ಯಾ ಪರಮಾಣು ಶಕ್ತಿ ಬಳಕೆಯ ಬಗ್ಗೆ ಹೆಜ್ಜೆ ಇಟ್ಟಿರುವುದು ಆತಂಕಕಾರಿ ಎಂದು ಒತ್ತಿ ಹೇಳಿದರು. ಅಮೆರಿಕ ಸಂಯುಕ್ತ ಸಂಸ್ಥಾನವೂ ಸಹ ಯುಎನ್ಎಸ್ ಸಿಯಲ್ಲಿ ಆತಂಕ ಪ್ರಕಟಿಸಿತು. ಚೀನಾ ಮತ್ತು ಭಾರತ ಸಹ ಯಾವುದೇ ದೇಶವನ್ನು ಗುರಿ ಮಾಡಿ ಮಾತನಾಡದೆ ಪರಮಾಣು ಆತಂಕ ವ್ಯಕ್ತಪಡಿಸಿದವು.

ಯಾವುದೇ ಸುರಕ್ಷತಾ ಕ್ರಮದ ಪದ್ಧತಿಯಲ್ಲಿ ನಾವು ರಾಜಿ ಮಾಡಿಕೊಳ್ಳುವಂತಿಲ್ಲ ಎಂದು ಐಎಇಎ ಮಹಾ ನಿರ್ದೇಶಕ ರಾಫೆಲ್ ಮಾರಿಯಾನೊ ಗ್ರೋಸಿ ಹೇಳಿದರು. ಇಸ್ರೇಲ್ ಹಾದಿಯಲ್ಲಿ ವೀಡಿಯೋ ಲಿಂಕ್ ಮಾಡಿ ಭಾಗವಹಿಸಿದ ಮಾರಿಯಾನೊ ಅವರು ಚೆರ್ನೋಬಿಲ್ ಗಿಂತ ದೊಡ್ಡ ಪರಮಾಣು ದುರಂತ ಉಂಟಾಗುವಂತೆ ರಷ್ಯಾ ಪರಮಾಣು ಸ್ಥಾವರಗಳ ಮೇಲೆ ದಾಳಿ ನಡೆಸಿದೆ. ಉಕ್ರೇನಿಯರಿಂದಲೇ ನಡೆಯುತ್ತಿರುವ ಅಣು ವಿದ್ಯುತ್ ಸ್ಥಾವರವನ್ನು ರಷ್ಯಾ ವಶಪಡಿಸಿಕೊಂಡಿದೆ ಎಂದೂ ಅವರು ಹೇಳಿದರು.

- Advertisement -

ವಿಶ್ವಸಂಸ್ಥೆಯಲ್ಲಿ ಭಾರತದ ಕಾಯಂ ಪ್ರತಿನಿಧಿಯಾದ ತಿರುಮೂರ್ತಿಯವರು ಪರಮಾಣು ದುರಂತದ ಅಪಾಯ ಇದೆ ಎಂಬ ಮಾತಿಗೇ ಅವಕಾಶ ಇರಬಾರದು ಎಂದರು. ಅದು ಜನರ ಆರೋಗ್ಯ ಮತ್ತು ಪರಿಸರ ನಾಶಕ್ಕೆ ಕಾರಣವಾಗುತ್ತದೆ ಎಂದೂ ಅವರು ಹೇಳಿದರು.

ಯುನೈಟೆಡ್ ಅರಬ್ ಎಮಿರೇಟ್ ನ ಕಾಯಂ ಪ್ರತಿನಿಧಿ ಲಾನಾ ನಸೀಬಿಯಾ ಅವರು ಮುಂದಿನ ತಲೆಮಾರು ನಮ್ಮನ್ನು ಶಪಿಸುವಂಥ ಪರಮಾಣು ದುರಂತಕ್ಕೆ ರಷ್ಯಾ ದಾರಿ ಮಾಡಬಾರದು ಎಂದು ಹೇಳಿದ್ದಾರೆ. ಮಾರ್ಚ್ ನಲ್ಲಿ ಯುಎಇ ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯ ಅಧ್ಯಕ್ಷತೆ ಹೊಂದಿದ್ದು ಅದರ ಜವಾಬ್ದಾರಿ ಅಧಿಕವಿದೆ.

ವಿನಾಶಕಾರರಿಂದ ಭೂಮಿ ನಾಶವಾಗುವುದಿಲ್ಲ. ನಾಶಕಾರರನ್ನು ನೋಡುತ್ತ ಸುಮ್ಮನೆ ಕುಳಿತುಕೊಳ್ಳುವವರಿಂದಾಗಿ ಭೂಮಿ ನಾಶ ಹೊಂದುತ್ತದೆ ಎಂದು ಕಿಸ್ಲಿಸ್ಠಾ ಹೇಳಿದರು.

ಝಪೋರ್ ಜಿಯಾ ಅಣು ವಿದ್ಯುತ್ ಕೇಂದ್ರವನ್ನು ವಶಪಡಿಸಿಕೊಳ್ಳಬೇಕಾದ ಪರಿಸ್ಥಿತಿಯನ್ನು ಉಕ್ರೇನ್ ತಂದುಕೊಂಡಿತು ಎಂದು ರಷ್ಯಾದ ರಕ್ಷಣಾ ಸಚಿವಾಲಯವು ಆಪಾದಿಸಿದೆ.

ಅಮೆರಿಕದ ಪ್ರತಿನಿಧಿ ಲಿಂಡಾ ಥಾಮಸ್ ಗ್ರೀನ್ ಫೀಲ್ಡ್ ಅವರು ರಷ್ಯಾ ಇನ್ನಷ್ಟು ಪರಮಾಣು ಕೇಂದ್ರಗಳ ಮೆಲೆ ಕಣ್ಣಿಟ್ಟಿದೆ. ಪುತಿನ್ ರ ಹುಚ್ಚಾಟಕ್ಕೆ ನಾವು ಕೊನೆ ಹಾಡಲೇ ಬೇಕಾದ ಸಮಯ ಬಂದಿದೆ ಎಂದರು.  ಈ ಭಾರೀ ಅಪಾಯ ಮುಂದುವರಿದಿದೆ ಎಂದೂ ಅಲವತ್ತುಕೊಂಡರು.

ಬ್ರಿಟನ್ನಿನ ಬಾರ್ಬರಾ ಉಡ್ ವಾರ್ಡ್ ರು “ರಷ್ಯಾ ಯುದ್ಧ ನಿಲ್ಲಿಸಬೇಕು, ಕೊನೆಯ ಮಟ್ಟಿಗೆ ಸದ್ಯ ಪರಮಾಣು ಕೇಂದ್ರಗಳಂಥ ಅಪಾಯಕಾರಿ ನೆಲೆಗಳಿಂದ ಯುದ್ಧವನ್ನು ದೂರ ವಿಡಬೇಕು ಎಂದು ಅವರು ತಿಳಿಸಿದರು.

ರಷ್ಯಾದ ವ್ಯಾಸಿಲಿ ನೆಬೆಂಜ್ಯಾ ಅವರು ಚೆರ್ನೋಬಿಲ್ ದುರಂತದ ದುಷ್ಪರಿಣಾಮವನ್ನು ಬೆಲಾರಸ್, ಉಕ್ರೇನ್ ಸಹಿತ ಉಂಡವರು ನಾವು. ಇನ್ನೊಂದು ಅಂಥ ದುರಂತಕ್ಕೆ ಕಾರಣವಾಗಬಾರದು ಎನ್ನುವುದಕ್ಕಾಗಿಯೇ ಪರಮಾಣು ಕೇಂದ್ರಗಳ ಸುರಕ್ಷತೆಯನ್ನು ನಮ್ಮ ಸೇನೆ ನೋಡಿಕೊಳ್ಳುತ್ತಿದೆ ಅಷ್ಟೆ ಎಂದು ತಿಳಿಸಿದರು.

ಉಕ್ರೇನಿನವರು ವಿದೇಶಿ ವಿದ್ಯಾರ್ಥಿಗಳನ್ನು ಒತ್ತೆ ಸೆರೆ ಇಟ್ಟುಕೊಂಡಿದ್ದಾರೆ. ನಿಮಗೆ ಅವೆಲ್ಲ ಕಾಣಿಸುವುದಿಲ್ಲವೇ ಎಂದೂ ವ್ಯಾಸಿಲಿ ಪ್ರಶ್ನಿಸಿದರು. 

ಭದ್ರತಾ ಮಂಡಳಿಯಲ್ಲಿ ಭಾರತ ಸೇರಿ ಹಲವರು ರಷ್ಯಾ ಖಂಡಿಸುವ ನಿರ್ಣಯಕ್ಕೆ ಸಹಿ ಮಾಡಲಿಲ್ಲ. ಆಗ ನ್ಯಾಟೋ ಪರ ಕಿಸ್ಲಿಸ್ಕಾ ಅವರು ನಾವು ಬೆರಳೆಣಿಕೆಯಷ್ಟು ಜನರಿರುವುದು ನಾಚಿಕೆಗೇಡು ಎಂದರು.



Join Whatsapp