ಬೆಂಗಳೂರು: ಡ್ರಗ್ಸ್ ಮಾರಾಟ ಸರಬರಾಜು ಸೇವನೆ ವಿರುದ್ಧ ಸಮರ ಸಾರಿರುವ ವೈಟ್ ಫೀಲ್ಡ್ ಪೊಲೀಸರು ಒಡಿಶಾದಿಂದ ಗಾಂಜಾ ಹಾಗೂ ಗಾಂಜಾ ಚಾಕೊಲೇಟ್ ಗಳನ್ನು ನಗರಕ್ಕೆ ತಂದು ಮಾರಾಟ ಮಾಡುತ್ತಿದ್ದ ಇಬ್ಬರು ಒಡಿಶಾದ ಡ್ರಗ್ ಪೆಡ್ಲರ್ ಗಳನ್ನು ಬಂಧಿಸಿದ್ದಾರೆ.
ಒಡಿಶಾದ ಬುಸುಡೆಪುರದ ಪ್ರದೀಪ್ ಕುಮಾರ್ ರಾವುತ್ (33) ಹಾಗೂ ಎಸ್. ಕೆ.ಸುಜಾನ್ ಆಲಿ(27)ಬಂಧಿತ ಆರೋಪಿಗಳಾಗಿದ್ದಾರೆ ಎಂದು ವೈಟ್ ಫೀಲ್ಡ್ ಡಿಸಿಪಿ ಎಸ್ .ಗಿರೀಶ್ ತಿಳಿಸಿದ್ದಾರೆ.
ಬಂಧಿತ ಆರೋಪಿಗಳಿಂದ 1 ಕೆಜಿ ಗಾಂಜಾ, 18 ಕೆಜಿ ತೂಕದ 3,200 ಗಾಂಜಾ ಚಾಕೊಲೇಟ್ ಗಳನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ.
ಮಹದೇವಪುರದ ಎ.ನಾರಾಯಣಪುರದ ಲೌರಿ ಸ್ಕೂಲ್ ಬಳಿ ಗಾಂಜಾ ಹಾಗೂ ಗಾಂಜಾ ಚಾಕೊಲೇಟ್ ಗಳನ್ನು ಮಾರಾಟ ಮಾಡುತ್ತಿದ್ದಾಗ ಕಾರ್ಯಾಚರಣೆ ಕೈಗೊಂಡ ಮಹದೇವಪುರ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಗಳು ಒಡಿಶಾದಿಂದ ರೈಲಿನಲ್ಲಿ ಗಾಂಜಾ ಹಾಗೂ ಗಾಂಜಾ ಚಾಕೊಲೇಟ್ ಗಳನ್ನು ನಗರಕ್ಕೆ ತಂದು ಮಾರಾಟ ಮಾಡುತ್ತಿರುವುದನ್ನು ಬಾಯ್ಬಿಟ್ಟಿದ್ದಾರೆ.
ಆರೋಪಿಗಳು ಜಿಗಣಿ ಎಲೆಕ್ಟ್ರಾನಿಕ್ ಸಿಟಿ ಸುತ್ತಮುತ್ತಲಿನ ಗಿರಾಕಿಗಳಿಗೆ ಪಾನ್ ಶಾಪ್ ಅಂಗಡಿಗಳಿಗೆ ಮಾರಾಟ ಮಾಡುವುದನ್ನು ಬಾಯ್ಬಿಟ್ಟಿದ್ದು ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ಗಿರೀಶ್ ತಿಳಿಸಿದರು.